ಡೈಲಿವಾರ್ತೆ:24/ಏಪ್ರಿಲ್ /2026

ಉಡುಪಿ: ಜಿಲ್ಲಾಧಿಕಾರಿ ಕಚೇರಿ ಮುಂದೆ ವಿದ್ಯುತ್ ಸ್ಪರ್ಶ: ಗುಮಾಸ್ತ ಸಾವು

ಉಡುಪಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾವಿನಕಾಯಿ ಕೊಯ್ಯುವ ಸಂದರ್ಭ
ನಡೆದ ದುರ್ಘಟನೆಯಲ್ಲಿ ಸರ್ಕಾರಿ ನೌಕರನೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವ ಸಂದರ್ಭದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ, ಕಚೇರಿಯ ಗುಮಾಸ್ತರಾಗಿದ್ದ ಸದಾನಂದ ಶೇರಿಗಾರ್ (53) ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡರು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಸದಾನಂದ ಶೇರಿಗಾರ್ ಅವರು ಉಡುಪಿ ಕುಕ್ಕಿಕಟ್ಟೆ ಪ್ರದೇಶದ ಡಯಾನ ಟಾಕೀಸ್ ಸಮೀಪದ ಕೃಷ್ಣಾಂಜನೇಯ ನಿಲಯದ ನಿವಾಸಿಯಾಗಿದ್ದು, ತಮ್ಮ ಕುಟುಂಬದ ಆಧಾರಸ್ತಂಭರಾಗಿದ್ದರು. ಅವರ ಅಗಲಿಕೆಯಿಂದ ಕುಟುಂಬದವರು ಸೇರಿದಂತೆ ಬಂಧುಬಳಗದಲ್ಲಿ ಆಳವಾದ ದುಃಖ ಮಡುಗಟ್ಟಿದೆ.
ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೆ ಒತ್ತಿ ಹೇಳುವಂತಾಗಿದೆ.