ಡೈಲಿವಾರ್ತೆ:25/ಏಪ್ರಿಲ್ /2026

ಕೈಲ್ಕೆರೆ ಸರ್ಕಾರಿ ಶಾಲೆಗೆ ಲಯನ್ಸ್ ಕ್ಲಬ್ ಶಿವಶಾಂತಿ ಮೊಳಹಳ್ಳಿ ವತಿಯಿಂದ ಗೋದ್ರೇಜ್ ಕಪಾಟು ಕೊಡುಗೆ​

ಕುಂದಾಪುರ : ಶಿಕ್ಷಣ ಸಂಸ್ಥೆಗಳ ಬಲವರ್ಧನೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ, ಲಯನ್ಸ್ ಕ್ಲಬ್ ಶಿವಶಾಂತಿ ಮೊಳಹಳ್ಳಿ ಹುಣಸೆಮಕ್ಕಿ ವತಿಯಿಂದ ಕೈಲ್ಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗೋದ್ರೇಜ್ ಕಪಾಟನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.​

ಈ ಕಪಾಟನ್ನು ಪಿ.ಎಂ.ಜೆ.ಎಫ್ ಲಯನ್ ರಂಜನ್ ಕಲ್ಕೂರ ಅವರು ಶಾಲೆಯ ಬಳಕೆಗಾಗಿ ದೇಣಿಗೆಯಾಗಿ ನೀಡಿದ್ದಾರೆ. ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷರಾದ ಲಯನ್ ದೀನಪಾಲ್ ಶೆಟ್ಟಿ ಅವರು ಕಪಾಟಿನ ಕೀಲಿಕೈಯನ್ನು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಹಸ್ತಾಂತರ ಪ್ರಕ್ರಿಯೆ ನೆರವೇರಿಸಿದರು.​

ಈ ಸಂದರ್ಭದಲ್ಲಿ ಮಾತನಾಡಿದ ಲಯನ್ ಸುಬ್ಬಣ್ಣ ಶೆಟ್ಟಿ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಾಲೆಯ ಉತ್ತರೋತ್ತರ ಅಭಿವೃದ್ಧಿಗೆ ಕ್ಲಬ್ ಸದಾ ಬೆಂಬಲ ನೀಡಲಿದೆ ಎಂದು ಹಾರೈಸಿದರು.​

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸಂತೋಷಕುಮಾರ್ ಶೆಟ್ಟಿ ಅವರು ಲಯನ್ಸ್ ಸದಸ್ಯರನ್ನು ಸ್ವಾಗತಿಸಿ, ಶಾಲೆಯ ಅಗತ್ಯತೆಯನ್ನು ಮನಗಂಡು ನೆರವು ನೀಡಿದ ಕ್ಲಬ್‌ನ ಕಾರ್ಯವೈಖರಿಯನ್ನು ಶ್ಲಾಘಿಸಿ ಧನ್ಯವಾದ ಸಮರ್ಪಿಸಿದರು.​

ವೇದಿಕೆಯಲ್ಲಿ ಕ್ಲಬ್ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ, ಖಜಾಂಚಿ ಬಾಲಕೃಷ್ಣ ಹೆಗ್ಡೆ, ಲಯನ್ ಸದಸ್ಯರಾದ ದಯಾನಂದ, ಶಂಭು ಶಂಕರ್ ಶೆಟ್ಟಿ, ರಮೇಶ್ ಶೆಟ್ಟಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾದ ಉದಯ ಕೊಠಾರಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.