



ಡೈಲಿವಾರ್ತೆ:25/ಏಪ್ರಿಲ್ /2026

ಉಡುಪಿ ಲೋಕಾಯುಕ್ತದಲ್ಲಿ ನಕಲಿ ಟ್ರ್ಯಾಪ್ ಆರೋಪ: ಹೈಕೋರ್ಟ್ ಮಧ್ಯಂತರ ತಡೆ, ಸಿಬಿಐ ತನಿಖೆಗೆ ಕಾನೂನು ಹೋರಾಟ ಎಚ್ಚರಿಕೆ

ಕುಂದಾಪುರ/ಉಡುಪಿ: ಭ್ರಷ್ಟಾಚಾರ ನಿರ್ಮೂಲನೆಯ ಹೆಸರಿನಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಮಾಯಕ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿದೆ ಎನ್ನಲಾದ ಉಡುಪಿ ಲೋಕಾಯುಕ್ತದ ಕೆಲವು ಸಿಬ್ಬಂದಿಗಳ ನಕಲಿ ಟ್ರ್ಯಾಪ್ ಕಾರ್ಯಾಚರಣೆ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗಂಗೊಳ್ಳಿ ಪಿಡಿಒ ಉಮಾಶಂಕರ್ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಸಾಕ್ಷಿ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾನ್ಯ ಹೈಕೋರ್ಟ್ ಇದೀಗ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ – ತಡೆಯಾಜ್ಞೆ ಜಾರಿ:
ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎಚ್. ಉಮಾಶಂಕರ್ ಮತ್ತು ರಾಮನಗರ ನ್ಯೂಸ್ ಕನ್ನಡ ದಿನಪತ್ರಿಕೆಯ ಉಪಸಂಪಾದಕರ ವಿರುದ್ಧ ದಾಖಲಾಗಿದ್ದ ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಡಾ. ರವಿಕುಮಾರ್ ಹುಕ್ಕೇರಿ ಮತ್ತು ವ್ಯವಸ್ಥಾಪಕ ರಾಮಚಂದ್ರ ಮಯ್ಯ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಹೆಣೆಯಲಾದ ಈ ಪ್ರಕರಣವು ವ್ಯವಸ್ಥಿತ ಪಿತೂರಿ ಎಂಬ ವಾದಕ್ಕೆ ಈ ತಡೆಯಾಜ್ಞೆ ಬಲ ನೀಡಿದೆ.
ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ – ಎಸ್‌ಪಿಗೆ ದೂರು:
ಪ್ರಕರಣದ ಸದ್ಯದ ತನಿಖಾಧಿಕಾರಿ ರಾಜೇಂದ್ರ ನಾಯ್ಕ್ ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪಿಡಿಒ ಉಮಾಶಂಕರ್ ಲೋಕಾಯುಕ್ತ ಎಸ್‌ಪಿಯವರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.ತನಿಖಾಧಿಕಾರಿಯು ನ್ಯಾಯಾಲಯ ಮತ್ತು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಅವರನ್ನು ತಕ್ಷಣವೇ ತನಿಖಾ ಜವಾಬ್ದಾರಿಯಿಂದ ಮುಕ್ತಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಒಂದು ವೇಳೆ ಈ ನಕಲಿ ಟ್ರ್ಯಾಪ್ ಪ್ರಕರಣದಲ್ಲಿ ರಾಜ್ಯ ಮಟ್ಟದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ, ಉಚ್ಚ ನ್ಯಾಯಾಲಯದ ಮೂಲಕ ಸಿಬಿಐ (CBI) ತನಿಖೆಗೆ ಮನವಿ ಸಲ್ಲಿಸುವುದಾಗಿ ಉಮಾಶಂಕರ್ ತಿಳಿಸಿದ್ದಾರೆ. ಈ ಪಿತೂರಿಯಲ್ಲಿ ಜಿಲ್ಲಾ ಪಂಚಾಯತ್‌ನ ಒಬ್ಬ ಅಧಿಕಾರಿ ಹಾಗೂ ನಿಯೋಜನೆಗೊಂಡಿರುವ ಮತ್ತೊಬ್ಬ ಪಿಡಿಒ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಇದು ಇಲಾಖಾ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನಕ್ಕೆ ಆಕ್ರೋಶ:
ಲೋಕಾಯುಕ್ತದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ದಾಖಲೆ ಸಮೇತ ವರದಿ ಮಾಡಿದ್ದ ಪತ್ರಿಕೆಯ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ಪತ್ರಿಕಾ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪತ್ರಿಕಾ ಸಂಸ್ಥೆ ಸ್ಪಷ್ಟಪಡಿಸಿದ್ದು, ಸತ್ಯದ ಪರವಾಗಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದೆ.
ಸದನದಲ್ಲಿ ಧ್ವನಿ ಎತ್ತಲು ಆಗ್ರಹ:
ದಕ್ಷ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಸಲಾಗುವ ಇಂತಹ ನಕಲಿ ಟ್ರ್ಯಾಪ್ ಹಾವಳಿಯ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಗಂಭೀರವಾಗಿ ಚರ್ಚಿಸಬೇಕು. ವ್ಯವಸ್ಥೆಯಲ್ಲಿರುವ ಇಂತಹ ಕಪ್ಪು ಚುಕ್ಕೆಗಳನ್ನು ಕಿತ್ತೆಸೆಯಲು ಕಾನೂನು ಸಭೆಯಲ್ಲಿ ಧ್ವನಿ ಎತ್ತಬೇಕೆಂದು ಸಾರ್ವಜನಿಕ ವಲಯ ಹಾಗೂ ಪತ್ರಿಕಾ ಸಂಘಟನೆ ಒತ್ತಾಯಿಸಿವೆ.