ಡೈಲಿವಾರ್ತೆ:25/ಏಪ್ರಿಲ್ /2026

ಸೊರಬ: 25 ಎಕರೆ ಇನಾಂ ಭೂಮಿ ಕಬಳಿಕೆ ಆರೋಪ: ಎಸಿ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ – ಏ. 27ಕ್ಕೆ ಬೃಹತ್ ಪ್ರತಿಭಟನೆ ಘೋಷಣೆ

ಶಿವಮೊಗ್ಗ, ಏಪ್ರಿಲ್ 25: ಸೊರಬ ತಾಲ್ಲೂಕಿನ ಶಂಕರಿಕೊಪ್ಪ ಗ್ರಾಮದಲ್ಲಿ ಸುಮಾರು 25 ಎಕರೆ ಇನಾಂ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲಾಗಿದೆ ಎಂಬ ಗಂಭೀರ ಆರೋಪ ಹೊರಬಂದಿದೆ.ದಲಿತ ಸಂಘರ್ಷ ಸಮಿತಿಯು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದೆ.

ಸೊರಬ ಪಟ್ಟಣದಲ್ಲಿ ನಡೆದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದ ಸಮಿತಿಯ ತಾಲ್ಲೂಕು ಸಂಚಾಲಕ ಮಹೇಶ್ ಶಕುನವಳ್ಳಿ, ಸರ್ವೆ ನಂಬರ್ 3, 4, 6, 30 ಮತ್ತು 47ರಲ್ಲಿನ ಇನಾಂ ಭೂಮಿ ಬಡ ರೈತರಿಗೆ ದೀರ್ಘ ಹೋರಾಟದ ಬಳಿಕ ಲಭಿಸಿತ್ತು ಎಂದು ವಿವರಿಸಿದರು.

ಆದರೆ ರಮೇಶ್ ನಾಡಿಗ್ ಎಂಬ ವ್ಯಕ್ತಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆ ಭೂಮಿಯನ್ನು ತನ್ನದಾಗಿಸಿಕೊಂಡಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ಸಾಗರ ಉಪ ವಿಭಾಗಾಧಿಕಾರಿ (ಎಸಿ) ವಿರೇಶಕುಮಾರ್ ಅವರ ಪಾತ್ರದ ಮೇಲೂ ಗಂಭೀರ ಅನುಮಾನ ವ್ಯಕ್ತಪಡಿಸಿದ ಮಹೇಶ್, ರೈತರಿಗೆ ಭೂಮಿ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೂರಿದರು.

ತಾಲ್ಲೂಕು ಕಚೇರಿಯ ಮೂಲ ದಾಖಲೆಗಳಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ, ನಕಲಿ ಸಹಿಗಳಿರುವ ಪತ್ರಗಳ ಆಧಾರದ ಮೇಲೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂಬುದು ದೊಡ್ಡ ಅಕ್ರಮ ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸಮಿತಿ, ಈ ಅವಧಿಯಲ್ಲಿ ನಡೆದ ಎಲ್ಲಾ ಅನುಮಾನಾಸ್ಪದ ಭೂ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಈ ಹಿನ್ನೆಲೆಯಲ್ಲಿ ಏಪ್ರಿಲ್ 27ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸೊರಬ, ಸಾಗರ ಹಾಗೂ ಹೊಸನಗರ ಭಾಗದ ಸಂತ್ರಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ.

ಸಭೆಯಲ್ಲಿ ಸಮಿತಿಯ ಮುಖಂಡರಾದ ಗುರುರಾಜ್, ಹರೀಶ್ ಚಿಟ್ಟೂರು ಹಾಗೂ ಶಂಕರಿಕೊಪ್ಪ ಗ್ರಾಮದ ಶಿವಕುಮಾರ್, ವಾಯುಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.