



ಡೈಲಿವಾರ್ತೆ:28/ಏಪ್ರಿಲ್ /2026

ಕಾರ್ಕಳ: ಕಾರು-ಬೈಕ್ ನಡುವೆ ನಡೆದ ಭೀಕರ ಅಪಘಾತ ಪ್ರಕರಣ: ತಂದೆಯ ಬೆನ್ನಲ್ಲೇ ಮಗಳೂ ಚಿಕಿತ್ಸೆ ಫಲಿಸದೆ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಕಾರ್ಕಳ: ನಿಟ್ಟೆ ಕಾಲೇಜು ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಪ್ರೇರಣಾ (18), ಚಿಕಿತ್ಸೆ ಫಲಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಏಪ್ರಿಲ್ 24 ರಂದು ನಡೆದ ಈ ದುರಂತದಲ್ಲಿ ತಂದೆ ನವೀನ್‌ಚಂದ್ರ ಮೂಲ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಪಡೆಯುತ್ತಿದ್ದ ಮಗಳೂ ಸಾವನ್ನಪ್ಪುವ ಮೂಲಕ ಇಡೀ ಕುಟುಂಬವನ್ನೇ ಈ ಅಪಘಾತ ಕಸಿದುಕೊಂಡಿದೆ.
ಘಟನೆಯ ಹಿನ್ನೆಲೆ:
ಏಪ್ರಿಲ್ 24 ರಂದು ಪ್ರೇರಣಾ ಅವರು ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿ ತಂದೆಯೊಂದಿಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ನಿಟ್ಟೆಯ ಪೆಟ್ರೋಲ್ ಬಂಕ್ ಸಮೀಪ ಕಾರ್ಕಳದಿಂದ ಅತೀ ವೇಗವಾಗಿ ಬಂದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿದ್ದ ಕಾರು, ನವೀನ್‌ಚಂದ್ರ ಅವರ ಬೈಕಿಗೆ ನೇರವಾಗಿ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ನವೀನ್‌ಚಂದ್ರ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು.
ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದ ಮಗಳು ಪ್ರೇರಣಾ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಮತ್ತೊಬ್ಬರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜು ವಿದ್ಯಾರ್ಥಿಗಳ ಅತೀ ವೇಗ ಹಾಗೂ ಅಜಾಗರೂಕ ಚಾಲನೆಯೇ ಈ ದುರಂತಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದ್ದು, ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶೋಕ ಸಾಗರದಲ್ಲಿ ಕುಟುಂಬ:
ಒಂದೇ ವಾರದಲ್ಲಿ ಪತಿ ಮತ್ತು ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಕ್ಕೆ ಆಧಾರವಾಗಿದ್ದ ಪತಿ ಹಾಗೂ ಭವಿಷ್ಯದ ಕನಸು ಹೊತ್ತಿದ್ದ ಮಗಳನ್ನು ಏಕಕಾಲದಲ್ಲಿ ಕಳೆದುಕೊಂಡ ಕುಟುಂಬವು ದಿಕ್ಕುತೋಚದಂತಾಗಿದೆ. ಇಡೀ ಗ್ರಾಮವೇ ಈ ಸಾವಿನ ಸುದ್ದಿಯಿಂದ ಮೌನಕ್ಕೆ ಶರಣಾಗಿದೆ