



ಡೈಲಿವಾರ್ತೆ:28/ಏಪ್ರಿಲ್ /2026

ಬ್ರಹ್ಮಾವರ: ಸರ್ವೋದಯ ಸೊಸೈಟಿ ಸಾಲದ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ – ಮೂವರ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ: ಸಾಲಕ್ಕೆ ಸಾಕ್ಷಿ ಸಹಿ ಹಾಕಲೆಂದು ಕರೆಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಗಂಭೀರ ಪ್ರಕರಣವೊಂದು ಬ್ರಹ್ಮಾವರದಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬ್ರಹ್ಮಾವರದ ಎಸ್. ಬಾಲಕೃಷ್ಣ ಹೆಗ್ಡೆ ಮತ್ತು ಗಂಗಾಧರ ಹೆಗ್ಡೆ ನೀಡಿದ ಖಾಸಗಿ ದೂರಿನನ್ವಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ಹೊಸಾಳು ಗ್ರಾಮದ ಬಾರ್ಕೂರಿನಲ್ಲಿರುವ ‘ಸರ್ವೋದಯ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್’ನಲ್ಲಿ ಜೆಸಿಬಿ ಯಂತ್ರ ಖರೀದಿಸಲು ಮೊದಲನೇ ಆರೋಪಿ ಎನ್. ಹರೀಶ್ ಕಾರಂತ್ ಎಂಬುವವರು ಸಾಲ ಪಡೆದಿದ್ದರು. ಈ ಸಂದರ್ಭದಲ್ಲಿ ದೂರುದಾರರಾದ ಬಾಲಕೃಷ್ಣ ಹೆಗ್ಡೆ ಹಾಗೂ ಗಂಗಾಧರ ಹೆಗ್ಡೆ ಅವರನ್ನು ಕೇವಲ ‘ಗುರುತು ಸಾಕ್ಷಿ’ಗಳಾಗಿ ಸಹಿ ಹಾಕುವಂತೆ ನಂಬಿಸಿ ಕರೆಸಲಾಗಿತ್ತು. ಆದರೆ, ಆರೋಪಿಗಳಾದ ಹರೀಶ್ ಕಾರಂತ್, ನಿತ್ಯಾನಂದ ಕಾಮತ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಸೇರಿಕೊಂಡು, ದೂರುದಾರರ ಸಹಿಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ‘ಜಾಮೀನುದಾರರು’ (Guarantors) ಎಂದು ಬಿಂಬಿಸುವ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ನಕಲಿ ದಾಖಲೆ ಸೃಷ್ಟಿ ಮತ್ತು ಆಸ್ತಿ ದುರುಪಯೋಗ: ದೂರುದಾರರ ಗಮನಕ್ಕೆ ತಾರದೆ ಅವರ ಹೆಸರಿನಲ್ಲಿ ಸಾಲದ ಹೊಣೆಗಾರಿಕೆಯನ್ನು ಸೃಷ್ಟಿಸಲಾಗಿದೆ. ಅಷ್ಟೇ ಅಲ್ಲದೆ, ಸಾಲಕ್ಕಾಗಿ ಅಡಮಾನವಿಟ್ಟಿದ್ದ ಜೆಸಿಬಿ ಕ್ರೇನ್ ಅನ್ನು ಆರೋಪಿಗಳು ಕಾನೂನುಬಾಹಿರವಾಗಿ ಮಾರಾಟ ಮಾಡಿ, ಆ ಹಣವನ್ನು ಸಾಲದ ಖಾತೆಗೆ ಜಮಾ ಮಾಡದೆ ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ಭದ್ರತಾ ಆಸ್ತಿಯನ್ನು ನಾಶಪಡಿಸಿ ಸೊಸೈಟಿಯ ಷರತ್ತುಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ನ್ಯಾಯಾಲಯದ ದಾರಿತಪ್ಪಿಸಿದ ಆರೋಪಿಗಳು:ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್ ಮುಂದೆ ಸುಳ್ಳು ಮಾಹಿತಿ ನೀಡಿ ಏಕಪಕ್ಷೀಯ ತೀರ್ಪು ಪಡೆಯಲಾಗಿದ್ದು, ಸುಮಾರು ₹33,89,899/- ವಸೂಲಾತಿಗಾಗಿ ದೂರುದಾರರ ವಿರುದ್ಧ ಎಕ್ಸಿಕ್ಯೂಶನ್ ಪ್ರಕರಣ ದಾಖಲಿಸಲಾಗಿದೆ.
ವಂಚನೆಯ ಜಾಲ ಎಷ್ಟು ಆಳವಾಗಿದೆಯೆಂದರೆ, ನಿಜವಾದ ಜಾಮೀನುದಾರರ ವಿರುದ್ಧ ಕ್ರಮ ಕೈಗೊಳ್ಳದೆ ಉದ್ದೇಶಪೂರ್ವಕವಾಗಿ ಸಾಕ್ಷಿ ಸಹಿ ಹಾಕಿದವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ, ದೂರುದಾರರು ಈ ಹಿಂದೆ ನೀಡಿದ್ದ ಖಾಲಿ ಚೆಕ್‌ಗಳನ್ನು ದುರುಪಯೋಗಪಡಿಸಿಕೊಂಡು ಹಣ ಸುಲಿಗೆಗೆ ಯತ್ನಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಬ್ರಹ್ಮಾವರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಂಚನೆ, ನಂಬಿಕೆ ದ್ರೋಹ, ನಕಲಿ ದಾಖಲೆ ಸೃಷ್ಟಿ ಮತ್ತು ಕಾನೂನುಬಾಹಿರ ಹಣ ಸುಲಿಗೆಯಂತಹ ಗಂಭೀರ ಕಲಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.