ಡೈಲಿವಾರ್ತೆ:28/ಏಪ್ರಿಲ್ /2026

​ಕಾರ್ಕಳ: ಜಾಗದ ವಿವಾದದ ಹಿನ್ನೆಲೆ ವೃದ್ಧನ ಮೇಲೆ ಭೀಕರ ಹಲ್ಲೆ – ಬೆಂಕಿ ಕೋಲಿನಿಂದ ಹೊಡೆದು ಕೊಲೆಗೆ ಯತ್ನ?​

ಕಾರ್ಕಳ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ, ಅವರು ಪ್ರಜ್ಞೆ ತಪ್ಪಿದ ಬಳಿಕ ಬೆಂಕಿ ಕೋಲಿನಿಂದ ಸುಟ್ಟು ಹಾಕಲು ಯತ್ನಿಸಿದ ಅಮಾನವೀಯ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದಲ್ಲಿ ನಡೆದಿದೆ.​

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ನಿವಾಸಿ ಹೆನ್ರಿ ಪಿಂಟೋ (65) ಅವರು 2008 ರಲ್ಲಿ ಬೆಳ್ಮಣ್ ಗ್ರಾಮದ ಎಮ್‌ಆರ್‌ಪಿಎಲ್ ಪೆಟ್ರೋಲ್ ಬಂಕ್ ಸಮೀಪ ಮೈಕೆಲ್ ಕುಟಿನ್ಹೋ ಎಂಬುವವರಿಂದ 50 ಸೆಂಟ್ಸ್ ಜಾಗವನ್ನು ಖರೀದಿ ಮಾಡಿದ್ದರು. ಈ ಜಾಗವನ್ನು ಮರಳಿ ತನಗೆ ಬಿಟ್ಟುಕೊಡಬೇಕೆಂದು ಮೈಕೆಲ್ ಕುಟಿನ್ಹೋ ನಿರಂತರವಾಗಿ ಹೆನ್ರಿ ಪಿಂಟೋ ಅವರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಘಟನೆ ವಿವರ: ದಿನಾಂಕ 09/04/2026 ರಂದು ಬೆಳಿಗ್ಗೆ ಹೆನ್ರಿ ಪಿಂಟೋ ಅವರು ತಮ್ಮ ಜಾಗದ ಸ್ವಚ್ಛತಾ ಕಾರ್ಯಕ್ಕಾಗಿ ತೆರಳಿ, ಅಲ್ಲಿನ ಕಸ ಕಡ್ಡಿಗಳಿಗೆ ಬೆಂಕಿ ಹಾಕಿದ್ದರು. ಬೆಳಿಗ್ಗೆ 10:30ರ ಸುಮಾರಿಗೆ ಅಲ್ಲಿಗೆ ಆಗಮಿಸಿದ ಆರೋಪಿ ಮೈಕೆಲ್ ಕುಟಿನ್ಹೋ, “ನಿನಗೆ ಇಲ್ಲಿ ಬೆಂಕಿ ಹಾಕಲು ಯಾರು ಹೇಳಿದ್ದು? ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಹೆನ್ರಿ ಪಿಂಟೋ ಅವರ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಪೆಟ್ಟಿನ ರಭಸಕ್ಕೆ ಹೆನ್ರಿ ಪಿಂಟೋ ಅವರು ಸ್ಥಳದಲ್ಲೇ ಸ್ಮೃತಿ ತಪ್ಪಿ ಬಿದ್ದಿದ್ದಾರೆ. ಹೆನ್ರಿ ಪಿಂಟೋ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ, ಆರೋಪಿ ಮೈಕೆಲ್ ಕುಟಿನ್ಹೋ ಬೆಂಕಿ ಉರಿಯುತ್ತಿದ್ದ ಕೋಲಿನಿಂದ ಅವರ ಎರಡೂ ಕಾಲುಗಳ ಮೀನಖಂಡಗಳಿಗೆ ಹೊಡೆದು ಗಂಭೀರ ಸುಟ್ಟ ಗಾಯಗಳನ್ನು ಮಾಡಿದ್ದಾನೆ ಎನ್ನಲಾಗಿದೆ. ತದನಂತರ ಸಂಚು ರೂಪಿಸಿದ ಆರೋಪಿ, ಪಿರ್ಯಾದಿದಾರರ ಸಂಬಂಧಿಕರಿಗೆ ಫೋನ್ ಮಾಡಿ ಹೆನ್ರಿ ಪಿಂಟೋ ಜಾಗದಲ್ಲಿ ಸ್ಮೃತಿ ತಪ್ಪಿ ಬಿದ್ದಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ. ಅದರಂತೆ ಆರೋಪಿಯ ಮಗ ಮತ್ತು ಇತರರು ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.​ ಆರಂಭದಲ್ಲಿ ಬೆಂಕಿಯ ಹೊಗೆಯ ಕಾರಣದಿಂದ ಸ್ಮೃತಿ ತಪ್ಪಿ ಬಿದ್ದಿರಬಹುದು ಎಂದು ಆಸ್ಪತ್ರೆಯಿಂದ ಮಾಹಿತಿ ಬಂದಿತ್ತಾದರೂ, ಹೆನ್ರಿ ಪಿಂಟೋ ಅವರು ಪ್ರಜ್ಞೆ ಬಂದ ನಂತರ ನೀಡಿದ ಹೇಳಿಕೆಯು ಘಟನೆಯ ಭೀಕರತೆಯನ್ನು ಹೊರಹಾಕಿದೆ. ಜಾಗವನ್ನು ಮರಳಿ ಪಡೆಯುವ ದುರುದ್ದೇಶದಿಂದಲೇ ಈ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸದ್ಯ ಸಂತ್ರಸ್ತ ಹೆನ್ರಿ ಪಿಂಟೋ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮೈಕೆಲ್ ಕುಟಿನ್ಹೋ ವಿರುದ್ಧ ಅಪರಾಧ ಕ್ರಮಾಂಕ 42/2026, ಕಲಂ: 115(2) ಹಾಗೂ 118(1) BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.