



ಡೈಲಿವಾರ್ತೆ:28/ಏಪ್ರಿಲ್ /2026

ವಿಜಯಾ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ, ಧರ್ಮದರ್ಶಿ ಕೈಲ್ಕೆರೆ ಸುಧಾಕರ್ ಭಂಡಾರಿ ನಿಧನ

ಕುಂದಾಪುರ: ವಿಜಯಾ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕರು ಹಾಗೂ ಕೈಲ್ಕೆರೆಯ ಶ್ರೀ ಕಂಚಮ್ಮ ದೈವಸ್ಥಾನದ ಮಾಜಿ ಧರ್ಮದರ್ಶಿಗಳಾದ ಶ್ರೀ ಕೈಲ್ಕೆರೆ ಸುಧಾಕರ್ ಭಂಡಾರಿ (79) ಅವರು ಸುದೀರ್ಘ ಅನಾರೋಗ್ಯದಿಂದಾಗಿ ಏಪ್ರಿಲ್ 27, 2026ರಂದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾದರು.
ವೃತ್ತಿ ಜೀವನ ಮತ್ತು ಸಾಧನೆ :
1947 ಅಕ್ಟೋಬರ್ 12 ರಂದು ಪ್ರತಿಷ್ಠಿತ ಕೈಲ್ಕೆರೆ ಕುಟುಂಬದಲ್ಲಿ ಜನಿಸಿದ ಸುಧಾಕರ್ ಭಂಡಾರಿ ಅವರು ವಿಜಯಾ ಬ್ಯಾಂಕ್‌ನಲ್ಲಿ ಸುಮಾರು 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು, ನವದೆಹಲಿ, ಹೈದರಾಬಾದ್, ಹುಬ್ಬಳ್ಳಿ ಮತ್ತು ಮಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಧಾರ್ಮಿಕ ಮತ್ತು ಸಾಮಾಜಿಕ ಸೇವೆ:
ಬ್ಯಾಂಕ್ ಸೇವೆಯಿಂದ ನಿವೃತ್ತರಾದ ಬಳಿಕ ಅವರು ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿಶೇಷವಾಗಿ ತೆಂಗು ಮತ್ತು ಅಡಿಕೆ ತೋಟಗಳ ಅಭಿವೃದ್ಧಿಯಲ್ಲಿ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರು. ಧಾರ್ಮಿಕ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರು, ಸುಮಾರು 17 ವರ್ಷಗಳಿಗೂ ಹೆಚ್ಚು ಕಾಲ ಕೈಲ್ಕೆರೆಯ ಶ್ರೀ ಕಂಚಮ್ಮ ದೈವಸ್ಥಾನದ ಧರ್ಮದರ್ಶಿಗಳಾಗಿ (ಮೊಕ್ತೇಸರರು) ಸೇವೆ ಸಲ್ಲಿಸಿದ್ದರು.
ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭೆ:
ಬ್ಯಾಂಕ್ ವೃತ್ತಿಯಲ್ಲಿದ್ದಾಗಲೇ ಅಭಿನಯದ ಕಲೆ ಮೈಗೂಡಿಸಿಕೊಂಡಿದ್ದ ಇವರು, ಕನ್ನಡದ ಖ್ಯಾತ ಚಲನಚಿತ್ರಗಳಾದ ‘ ತರ್ಕ’ ಮತ್ತು ‘ಅವನೇ ನನ್ನ ಗಂಡ’ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.
ಇವರು ದಿವಂಗತ ಶ್ರೀ ಜಿ.ಎನ್. ನರಸಿಂಹ ಭಂಡಾರಿ ಮತ್ತು ದಿವಂಗತ ಶ್ರೀಮತಿ ಗಿರಿಜಮ್ಮ ಎನ್. ಭಂಡಾರಿ ದಂಪತಿಗಳ ಹಿರಿಯ ಪುತ್ರ. ಇವರು ಪತ್ನಿ ಸುಲೋಚನಾ ಎಸ್. ಭಂಡಾರಿ, ಪುತ್ರರಾದ ಸಂದೀಪ್ ಭಂಡಾರಿ, ಮಂಗಳೂರಿನ ಎ.ಜೆ. ಆಸ್ಪತ್ರೆಯ ಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ. ಸನತ್ ಭಂಡಾರಿ, ಪುತ್ರಿ ಸಹನಾ ರಾಬಿನ್ ಶೆಟ್ಟಿ ಹಾಗೂ ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅಲ್ಲದೆ ಸಹೋದರ ರತ್ನಾಕರ್ ಭಂಡಾರಿ, ಸಹೋದರಿ ಕುಮಾರಿ ಕಲ್ಪನಾ ಭಂಡಾರಿ ಹಾಗೂ ಅಗಲಿದ ಇತರ ನಾಲ್ವರು ಸಹೋದರ-ಸಹೋದರಿಯರ ಅಪಾರ ಬಂಧುಬಳಗವನ್ನು ಅವರು ಹೊಂದಿದ್ದಾರೆ.