



ಡೈಲಿವಾರ್ತೆ:28/ಏಪ್ರಿಲ್ /2026

ಅತ್ರಾಡಿ: ತಾಯಿ-ಮಗಳ ಭೀಕರ ಹತ್ಯೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ತೀರ್ಪು

ಉಡುಪಿ: ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದಿದ್ದ ತಾಯಿ ಮತ್ತು ಮಗಳ ದಾರುಣ ಹತ್ಯೆ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ಮೃತರ ಆತ್ಮಕ್ಕೆ ನ್ಯಾಯ ಸಿಕ್ಕಿದೆ.
ಪೈಶಾಚಿಕ ಕೃತ್ಯ ಎಸಗಿದ್ದ ಭದ್ರಾವತಿ ಮೂಲದ ಆರೋಪಿಗೆ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು
ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ:
2022ರ ಮೇ 9ರಂದು ಅತ್ರಾಡಿ ಗ್ರಾಮದ ಮದಗ ನಿವಾಸಿ ಚೆಲುವಿ ಹಾಗೂ ಅವರ ಅಪ್ರಾಪ್ತ ಪುತ್ರಿ ಪ್ರಿಯಾ ಎಂಬುವವರು ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಮೇ 8ರ ಸಂಜೆ ಮತ್ತು 9ರ ಬೆಳಗಿನ ಜಾವದ ಅವಧಿಯಲ್ಲಿ ಈ ಕೃತ್ಯ ನಡೆದಿದ್ದು, ತಾಯಿ-ಮಗಳಿಬ್ಬರನ್ನೂ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು.
ಘಟನೆಗೆ ಸಂಬಂಧಿಸಿದಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದ ತಂಡ ಚುರುಕಿನ ತನಿಖೆ ನಡೆಸಿ, ಭದ್ರಾವತಿ ತಾಲೂಕಿನ ಜನ್ನಾಪುರ ನಿವಾಸಿ ಹರೀಶ್ ಆರ್ ಯಾನೆ ಗಣೇಶ್ (30) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಆರೋಪಿಯ ವಿರುದ್ಧ ಸಕಲ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Charge Sheet) ಸಲ್ಲಿಸಲಾಗಿತ್ತು.
ದೀರ್ಘಕಾಲದ ವಿಚಾರಣೆ ನಡೆಸಿದ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳನ್ನು ಪುರಸ್ಕರಿಸಿದ್ದಾರೆ. ಆರೋಪಿ ಹರೀಶ್ ಮಾಡಿರುವ ಕೃತ್ಯ ಅಮಾನವೀಯ ಎಂದು ಪರಿಗಣಿಸಿದ ನ್ಯಾಯಾಲಯವು ಕೆಳಗಿನಂತೆ ಶಿಕ್ಷೆ ಪ್ರಕಟಿಸಿದೆ.
ಆರೋಪಿಗೆ ಜೀವಿತಾವಧಿಯವರೆಗೆ ಕಾರಾಗೃಹ ವಾಸ, ₹20,000 ಆರ್ಥಿಕ ದಂಡ ವಿಧಿಸಲಾಗಿದೆ.
ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ. ಎರಡು ಜೀವಗಳನ್ನು ಬಲಿಪಡೆದ ಕ್ರೂರಿಗೆ ನ್ಯಾಯಾಲಯವು ಸೂಕ್ತ ಶಿಕ್ಷೆಯನ್ನೇ ವಿಧಿಸಿದೆ, ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ತೀರ್ಪಿನ ಮೂಲಕ ಹಿರಿಯಡಕ ಪೊಲೀಸರ ದಕ್ಷ ತನಿಖೆಗೆ ಜಯ ಸಿಕ್ಕಂತಾಗಿದ್ದು, ನೊಂದ ಕುಟುಂಬಕ್ಕೆ ಅಲ್ಪಮಟ್ಟಿನ ಸಮಾಧಾನ ಸಿಕ್ಕಂತಾಗಿದೆ.