ಡೈಲಿವಾರ್ತೆ: 01/ಮೇ/2026

ರಾಜ್ಯದಲ್ಲಿ ಇಂದು ಬಾರೀ ಮಳೆ ಸಾಧ್ಯತೆ: ಬೆಂಗಳೂರು ಸೇರಿ ಹತ್ತು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ

​ಬೆಂಗಳೂರು, ಮೇ. 01: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯಲಿದ್ದು, ಶುಕ್ರವಾರ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

​ಆರೆಂಜ್ ಅಲರ್ಟ್ ಘೋಷಿತ ಜಿಲ್ಲೆಗಳು:
​ಹವಾಮಾನ ಇಲಾಖೆಯ ವರದಿಯ ಪ್ರಕಾರ, ಈ ಕೆಳಗಿನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ:
​ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ
​ಮೈಸೂರು, ಮಂಡ್ಯ ಮತ್ತು ರಾಮನಗರ
​ಕೋಲಾರ, ತುಮಕೂರು ಮತ್ತು ಹಾಸನ
​ಕೊಡಗು ಮತ್ತು ಚಾಮರಾಜನಗರ
​ಆಲಿಕಲ್ಲು ಮಳೆ ಆಗಲಿದೆ ಹಾಗೂ ಬಿರುಗಾಳಿಯ ಎಚ್ಚರಿಕೆ. ಕೇವಲ ಮಳೆ ಮಾತ್ರವಲ್ಲದೆ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನುಳಿದಂತೆ ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ.

​ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮಳೆಯ ಆರ್ಭಟದ ನಡುವೆ ನಗರದಲ್ಲಿ ತಾಪಮಾನವು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ವಾರ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಗರಿಷ್ಠ ತಾಪಮಾನವು ಇದೀಗ 35 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ.

​ದಕ್ಷಿಣ ಒಳನಾಡಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.