



ಡೈಲಿವಾರ್ತೆ: 01/ಮೇ/2026

ಡಿಸಿಎಂ ಡಿ.ಕೆ. ಶಿವಕುಮಾರ್ ಮನೆಗೆ ಮಹಾಲಕ್ಷ್ಮಿಯ ಆಗಮನ: ತಾತನಾಗಿ ಭಡ್ತಿ ಪಡೆದ ‘ಕನಕಪುರ ಬಂಡೆ’

ಬೆಂಗಳೂರು: ರಾಜ್ಯ ರಾಜಕಾರಣದ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ತಾತನಾಗಿ ಭಡ್ತಿ ಪಡೆದಿದ್ದಾರೆ.
ಶುಭ ದಿನದಂದೇ ಮಗುವಿನ ಜನನ:
ವೈಶಾಖ ಹುಣ್ಣಿಮೆ ಹಾಗೂ ಬುದ್ಧ ಪೂರ್ಣಿಮೆಯ ಪವಿತ್ರ ದಿನದಂದೇ ಡಿ.ಕೆ. ಶಿವಕುಮಾರ್ ಅವರ ಮೊಮ್ಮಗಳ ಜನನವಾಗಿರುವುದು ವಿಶೇಷ. ಅದರಲ್ಲೂ ಡಿಕೆಶಿಯವರ ರಾಜಕೀಯ ಗುರುಗಳಾದ ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರ ಜನ್ಮದಿನದಂದೇ ಐಶ್ವರ್ಯ ಅವರು ಮಗುವಿಗೆ ಜನ್ಮ ನೀಡಿರುವುದು ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮಗಳು ಹಾಗೂ ಮೊಮ್ಮಗಳ ಆರೋಗ್ಯ ವಿಚಾರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.
ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ವಿ.ಜಿ. ಸಿದ್ದಾರ್ಥ ಹಾಗೂ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗ್ಡೆ ಅವರೊಂದಿಗೆ ಐಶ್ವರ್ಯ ಅವರ ವಿವಾಹವು 2021ರ ಫೆಬ್ರವರಿ 14 ರಂದು ವೈಭವಯುತವಾಗಿ ನೆರವೇರಿತ್ತು. ಅಂದು ನಡೆದ ವಿವಾಹ ಮಹೋತ್ಸವದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ದೇಶದ ಘಟಾನುಘಟಿ ನಾಯಕರು ಭಾಗವಹಿಸಿದ್ದರು.
ಮಹಾಲಕ್ಷ್ಮಿಯ ಆಗಮನದಿಂದ ಹೆಗ್ಡೆ ಹಾಗೂ ಡಿ.ಕೆ. ಶಿವಕುಮಾರ್ ಕುಟುಂಬದಲ್ಲಿ ಹಬ್ಬದ ಕಳೆ ಬಂದಿದ್ದು, ಅಭಿಮಾನಿಗಳು ಹಾಗೂ ರಾಜಕೀಯ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಡಿಸಿಎಂ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.