ಡೈಲಿವಾರ್ತೆ: 02/ಮೇ/2026

ಸುಜ್ಞಾನ ಅಂಗಳದಲ್ಲಿ ‘ಮಂಥನ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ:ವಿದ್ಯಾರ್ಥಿಗಳ ಸೃಜನಶೀಲ ವಿಕಸನಕ್ಕೆ ‘ಮಂಥನ’ ನಾಂದಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

​ಕುಂದಾಪುರ: ಶಿಕ್ಷಣ ಸಂಸ್ಥೆಯು ಕೇವಲ ಪಠ್ಯದ ಚೌಕಟ್ಟಿಗೆ ಸೀಮಿತವಾಗದೆ, ವರ್ಷವಿಡೀ ಇಂತಹ ವೈವಿಧ್ಯಮಯ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಸುಜ್ಞಾನ ಶಿಕ್ಷಣ ಸಂಸ್ಥೆಯು ‘ಮಂಥನ’ ಬೇಸಿಗೆ ಶಿಬಿರದ ಮೂಲಕ ಸಾವಿರಾರು ಮಕ್ಕಳಲ್ಲಿ ಜ್ಞಾನದ ಜ್ಯೋತಿ ಬೆಳಗಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.​

ಮೇ 2 ರಂದು ಶನಿವಾರ ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದ್ದ ‘ಮಂಥನ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸುಜ್ಞಾನ ​ಸಂಸ್ಥೆಯ ಬೆಳವಣಿಗೆಯನ್ನು ಗುರುತಿಸಿದ ಶಾಸಕರು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯು ಇಂದು ಇಷ್ಟು ದೊಡ್ಡ ಮಟ್ಟದ ಶೈಕ್ಷಣಿಕ ಕ್ರಾಂತಿ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಲ್ಲಿನ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಿರುವುದು ಸಂತಸದ ವಿಷಯ. ಈ ಶಿಬಿರದಲ್ಲಿ ಭಾಗವಹಿಸಿದವರಲ್ಲಿ ಶೇ. 80 ರಷ್ಟು ವಿದ್ಯಾರ್ಥಿಗಳು ಹೊರಗಿನವರು ಎನ್ನುವುದು ಸಂಸ್ಥೆಯ ಸಾಮಾಜಿಕ ಕಳಕಳಿಗೆ ಸಾಕ್ಷಿ. 1,500ಕ್ಕೂ ಹೆಚ್ಚು ಮಕ್ಕಳನ್ನು ಒಂದು ವಾರ ಕಾಲ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ರಮೇಶ್ ಶೆಟ್ಟಿ ಅವರ ತಂಡದ ಪರಿಶ್ರಮ ದೊಡ್ಡದು ಎಂದರು.

​ಹನುಮಂತನ ಶಕ್ತಿ ನೆನಪಿಸಿದ ಜಾಂಬವಂತನಂತೆ ಶಿಬಿರದ ಕಾರ್ಯ: ಕೆ.ಸಿ. ರಾಜೇಶ್ ಪತ್ರಕರ್ತ

ಹಿರಿಯ ಪತ್ರಕರ್ತರಾದ ಕೆ.ಸಿ. ರಾಜೇಶ್ ಮಾತನಾಡಿ, ಹನುಮಂತನಿಗೆ ಅವನ ಸುಪ್ತ ಶಕ್ತಿಯನ್ನು ನೆನಪಿಸಿದ ಜಾಂಬವಂತನಂತೆ, ಹಾಗೆ ಈ ಸುಜ್ಞಾನ ಸಂಸ್ಥೆಯು ಮಕ್ಕಳಲ್ಲಿರುವ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಜಾಗೃತಗೊಳಿಸಿದೆ. ಇದು ಕೇವಲ ಪ್ರಾದೇಶಿಕ ಶಿಬಿರವಲ್ಲ, ಗುಜರಾತ್ ಮತ್ತು ಬೆಂಗಳೂರಿನಂತಹ ನಗರಗಳಿಂದಲೂ ವಿದ್ಯಾರ್ಥಿಗಳು ಪಾಲ್ಗೊಂಡಿರುವುದರಿಂದ ಇದು ರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ. ಅಂತರಾಷ್ಟ್ರೀಯ ಮಟ್ಟದ ಜಾದೂಗಾರರು, ಯಕ್ಷಗಾನ ಮತ್ತು ಕಂಬಳದ ಗದ್ದೆಯ ಅಪ್ಪಟ ಗ್ರಾಮೀಣ ಅನುಭವದ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವೇದಿಕೆ ಇಲ್ಲಿದೆ ಎಂದು ಶ್ಲಾಘಿಸಿದರು.

ತಂಡಗಳ ಮೂಲಕ ವ್ಯವಸ್ಥಿತ ತರಬೇತಿ:​ ಡಾ. ರಮೇಶ್ ಶೆಟ್ಟಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ ನೊಂದಾವಣೆಗೊಂಡ 1,500 ವಿದ್ಯಾರ್ಥಿಗಳನ್ನು ವಿವಿಧ ತಂಡಗಳನ್ನಾಗಿ ವಿಂಗಡಿಸಿ, ಪ್ರತಿಯೊಬ್ಬರಿಗೂ ವೈಯಕ್ತಿಕ ಗಮನ ನೀಡುವ ಮೂಲಕ ಶಿಬಿರ ನಡೆಸಲಾಗಿದೆ. ಇಲ್ಲಿ ಕಲಿತ ಅನುಭವಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿ ಎಂದು ಆಶಿಸಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಅವರು ಶಿಬಿರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.​

ಪೋಷಕರು ಮತ್ತು ಶಿಬಿರಾರ್ಥಿಗಳ ಮೆಚ್ಚುಗೆ​ಶಿಬಿರದ ಕುರಿತು ಅಭಿಪ್ರಾಯ ಹಂಚಿಕೊಂಡ ಪೋಷಕರಾದ ಸುರೇಂದ್ರರಾವ್, ರಾಘವೇಂದ್ರ ಶೇಟ್, ರೇಖಾ ಕುಲಾಲ್ ಮತ್ತು ಅತಿಥಿ ಅಶೋಕ್ ತೆಕ್ಕಟ್ಟೆ ಅವರು, ನಕ್ಷತ್ರ ಹೋಟೆಲ್ ಮಾದರಿಯ ಉತ್ತಮ ಆಹಾರದ ವ್ಯವಸ್ಥೆ ಹಾಗೂ ನೈಜ ಪ್ರಾತ್ಯಕ್ಷಿಕೆಗಳ ಮೂಲಕ ಶಿಬಿರವನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ದೊರೆತ ತರಬೇತಿ ಅನನ್ಯವಾದುದು ಎಂದರು.

ಶಿಬಿರಾರ್ಥಿಗಳಾದ ಶ್ರೀಯಾ ಎಸ್ ಕಾಂಚನ್, ಸಾನ್ನಿಧ್ಯ, ಪ್ರಣಿತ ಕೇಶವ ಮತ್ತಿತರರು ತಮ್ಮ ಅನುಭವ ಹಂಚಿಕೊಂಡರು.​

ಗಮನ ಸೆಳೆದ ಸಮಾರೋಪ:

​ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ‘ಮಂಥನ ಪ್ರಶಸ್ತಿ’ಗಳನ್ನು ವಿತರಿಸಲಾಯಿತು.

ಶಿಕ್ಷಕಿ ವೈಷ್ಣವಿ ವಿಜೇತರ ಪಟ್ಟಿ ಓದಿದರು. ವೇದಿಕೆಯಲ್ಲಿ ಮುಖ್ಯೋಪಾದ್ಯಾಯ ಪ್ರದೀಪ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರಂಜನ್ ಶೆಟ್ಟಿ ಸ್ವಾಗತಿಸಿ, ವಿನಯ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.