



ಡೈಲಿವಾರ್ತೆ: 08/ಮೇ/2026

ಕೊಪ್ಪಳದಲ್ಲಿ ‘ಲವ್ ಜಿಹಾದ್’ ಕಿಡಿ: ಮುಸ್ಲಿಂ ಯುವಕನ ಮೇಲೆ ಗುಂಪು ಹಲ್ಲೆ, 8 ಮಂದಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಬಂಧನ

ಕೊಪ್ಪಳ: ಗವಿನಾಡಿನಲ್ಲಿ ಮತ್ತೆ ಲವ್ ಜಿಹಾದ್ ಆರೋಪದ ಕಿಡಿ ಹೊತ್ತಿಕೊಂಡಿದ್ದು, ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಜಿಲ್ಲೆಯಾದ್ಯಂತ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ.
ಹಿಂದೂ ಯುವತಿಯೊಂದಿಗೆ ಇದ್ದ ಎಂಬ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪೊಲೀಸರು ಎಂಟು ಮಂದಿ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಕೊಪ್ಪಳದ ನಿರ್ಮಿತಿ ಕೇಂದ್ರದ ಬಳಿಯ ಕಾಲೋನಿ ನಿವಾಸಿ ಸಮೀರ್ ಮೂಲಿಮನಿ ಎಂಬಾತನೇ ಹಲ್ಲೆಗೊಳಗಾದ ಯುವಕ.
ಘಟನೆಯ ಹಿನ್ನೆಲೆ:
ಏಪ್ರಿಲ್ 7 ರಂದು ಸಮೀರ್ ನಗರದ ಹರ್ಷ ಹೋಟೆಲ್ ಬಳಿ ನಿಂತಿದ್ದಾಗ 10 ರಿಂದ 11 ಮಂದಿಯ ತಂಡ ಆತನನ್ನು ಅಪಹರಿಸಿ, ನಗರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮನಬಂದಂತೆ ಹಲ್ಲೆ ನಡೆಸಿದೆ. ಹಲ್ಲೆಕೋರರು ಸಮೀರ್‌ನ ಮೊಬೈಲ್ ಕಿತ್ತುಕೊಂಡು, ಆತ ಪ್ರಜ್ಞೆ ತಪ್ಪಿದ ಬಳಿಕ ಆರ್.ಟಿ.ಓ ಕಚೇರಿ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಈ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಯುವತಿಯೊಂದಿಗೆ ಕುಳಿತಿದ್ದ ಎಂಬ ಕಾರಣಕ್ಕೆ ಗುಂಪು ಹಲ್ಲೆ ನಡೆದಿದೆ. ಸಂತ್ರಸ್ತ ಯುವಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯಕ್ಕೆ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಹಲ್ಲೆಗೊಳಗಾದ ಸಮೀರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಾರ್ಯಕರ್ತರ ಆಕ್ರೋಶ ಮತ್ತು ರಾಜಕೀಯ ತಿರುವು:
ಈ ಬಂಧನ ಕ್ರಮವು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದರಿ ಯುವಕ ಲವ್ ಜಿಹಾದ್ ಕೃತ್ಯದಲ್ಲಿ ತೊಡಗಿದ್ದ ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ. ಈ ನಡುವೆ ಬಿಜೆಪಿ ಮುಖಂಡರು ಕೂಡ ಧ್ವನಿಗೂಡಿಸಿದ್ದು, ಹಲ್ಲೆಗೊಳಗಾದ ಯುವಕ ಮತ್ತು ಆತನ ಕುಟುಂಬದ ಮೇಲೆಯೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಠಾಣೆಯ ಮುಂದೆ ಬಿಗುವಿನ ವಾತಾವರಣ:
ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಠಾಣೆಯ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರದಂತೆ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.