ಡೈಲಿವಾರ್ತೆ: 08/ಮೇ/2026

‘ಎಸ್ಪಿ ಸ್ಕ್ವಾಡ್’ ಹೆಸರಿನಲ್ಲಿ ಲಕ್ಷಾಂತರ ವಸೂಲಿ: ಪಡಿತರ ಅಕ್ಕಿ ಪ್ರಕರಣದಲ್ಲಿ ಎಸ್ಪಿ ಗನ್‌ಮ್ಯಾನ್ ಬಂಧನ

ಬಳ್ಳಾರಿ, ಮೇ 08: ಜಿಲ್ಲೆಯ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದ್ದು, ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಗನ್‌ಮ್ಯಾನ್‌ ಆಗಿದ್ದ ದೇವರಾಜ್ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಪ್ರಕರಣದಲ್ಲಿ ಹಣ ವಸೂಲಿ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ.

ಕಾನೂನು ಕಾಪಾಡಬೇಕಾದ ವ್ಯಕ್ತಿಯೇ ಅಧಿಕಾರದ ಹೆಸರಿನಲ್ಲಿ ಸುಲಿಗೆ ನಡೆಸಿದ್ದಾನೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮಡಕೇರಿಯಿಂದ ಆಂಧ್ರಪ್ರದೇಶದತ್ತ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿದ ದೇವರಾಜ್ ಹಾಗೂ ಆತನ ಸಹಚರರು, ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿಕೊಂಡು ಚಾಲಕರನ್ನು ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಮುಚ್ಚಿಹಾಕಲು ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ಮೂರು ಲಕ್ಷ ರೂ. ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.
ಹಣ ನೀಡದಿದ್ದರೆ ಲಾರಿಗಳನ್ನು ವಶಪಡಿಸಿಕೊಂಡು ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಶರಭಯ್ಯ ಎಂಬುವರು ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಎಸ್ಪಿ ಗನ್‌ಮ್ಯಾನ್ ದೇವರಾಜ್ ಈ ಅಕ್ರಮ ವಸೂಲಿಯಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸುಮನ್ ಡಿ. ಪನ್ನೇಕರ್ ಖುದ್ದಾಗಿ ಮಧ್ಯಪ್ರವೇಶಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅವರ ನಿರ್ದೇಶನದಂತೆ ದೇವರಾಜ್ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಇಲಾಖೆಯೊಳಗೇ ಇಂತಹ ಅಕ್ರಮ ಚಟುವಟಿಕೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಇಲಾಖೆಯ ಗೌರವಕ್ಕೂ ಧಕ್ಕೆಯಾಗಿದೆ. ಪ್ರಕರಣದ ಹಿಂದೆ ಇನ್ನೂ ಹೆಚ್ಚಿನ ಜಾಲವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.