



ಡೈಲಿವಾರ್ತೆ: 08/ಮೇ/2026

ಮೇ 11ರೊಳಗೆ ಮತದಾರರ ಎಸ್‌ಐಆರ್ ಮ್ಯಾಪಿಂಗ್ ಕಡ್ಡಾಯ: ನಿರ್ಲಕ್ಷ್ಯ ಬೇಡ – ಉಸ್ಮಾನ್ ಗುರುಪುರ

ಗುರುಪುರ, ಮೇ 8: ಕೇಂದ್ರ ಸರ್ಕಾರದ ಎಸ್‌ಐಆರ್ (SIR) ಮ್ಯಾಪಿಂಗ್ ಪ್ರಕ್ರಿಯೆ ಇದೇ ಬರುವ ಮೇ 11ರಂದು ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಚುನಾವಣಾ ಪಟ್ಟಿಯಲ್ಲಿ ಸರಿಯಾಗಿ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು SDPI ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಗುರುಪುರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮತದಾರರು ತಮ್ಮ ವ್ಯಾಪ್ತಿಯ ಬೂತ್ ಲೆವೆಲ್ ಅಧಿಕಾರಿ (BLO)ಗಳನ್ನು ಸಂಪರ್ಕಿಸಿ ಹೆಸರು ಮ್ಯಾಪಿಂಗ್ ಆಗಿರುವ ಬಗ್ಗೆ ತಕ್ಷಣ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಹೆಸರು ಮ್ಯಾಪಿಂಗ್ ಆಗದೇ ಉಳಿದಿದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ ಕೂಡಲೇ ಕ್ರಮ ಕೈಗೊಂಡು ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಅತ್ಯಂತ ಮಹತ್ವದ್ದಾಗಿದ್ದು, ಮತದಾರರ ಪಟ್ಟಿಯಲ್ಲಿ ತಾಂತ್ರಿಕ ದೋಷ ಅಥವಾ ಮ್ಯಾಪಿಂಗ್ ಸಮಸ್ಯೆಯಿಂದ ಹೆಸರು ಕೈ ತಪ್ಪದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಸಮಗ್ರ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಸಂಘ-ಸಂಸ್ಥೆಗಳು, ಸಾಮಾಜಿಕ ಮುಖಂಡರು ಹಾಗೂ SDPI ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ತಮ್ಮ ತಮ್ಮ ಮೊಹಲ್ಲಾ ಹಾಗೂ ವಾರ್ಡ್ ವ್ಯಾಪ್ತಿಯಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಉಸ್ಮಾನ್ ಗುರುಪುರ ಕರೆ ನೀಡಿದ್ದಾರೆ.