ಡೈಲಿವಾರ್ತೆ: 08/ಮೇ/2026

ಗೃಹಜ್ಯೋತಿ ನೆಪದಲ್ಲಿ ಡಿಜಿಟಲ್ ದರೋಡೆ, ವಾರಂವಾರ ವಿದ್ಯುತ್ ವ್ಯತ್ಯಯ, ಟಿ.ಸಿ ಸ್ಥಳಾಂತರ: ಕೋಟ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಆಕ್ರೋಶ

ಕೋಟ: ವಿದ್ಯುತ್ ಮಾಸಿಕ ಬಿಲ್‌ನಲ್ಲಿ ಅತಿಯಾದ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪದೊಂದಿಗೆ ಕೋಟ ಮೆಸ್ಕಾಂ ಉಪವಿಭಾಗದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

ಕೋಟ ಮೆಸ್ಕಾಂ ಉಪವಿಭಾಗ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಸದಸ್ಯ ರವೀಂದ್ರ ತಿಂಗಳಾಯ ಸೇರಿದಂತೆ ಹಲವರು ತಮ್ಮ ವಿದ್ಯುತ್ ಬಿಲ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಗೃಹಜ್ಯೋತಿ ಯೋಜನೆಯ ಹೆಸರಿನಲ್ಲಿ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು ಮೆಸ್ಕಾಂ ಹಗಲು ದರೋಡೆ ರೀತಿಯಲ್ಲಿ ಡಿಜಿಟಲ್ ಹಗರಣ ನಡೆಸುತ್ತಿದೆ. ಸಮಸ್ಯೆಗೆ ಸ್ಪಷ್ಟ ಪರಿಹಾರ ನೀಡದೇ ಸಭೆಯಿಂದ ತೆರಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ರಾಘವೇಂದ್ರ ಐರೋಡಿ, ಸಾಮಾನ್ಯ ಗ್ರಾಹಕರ ಹಣಕ್ಕೆ ಬೆಲೆ ಇಲ್ಲವೇ? ಪ್ರತಿಮಾಸವೂ ಅಸಹಜ ಬಿಲ್‌ಗಳು ಬರುತ್ತಿವೆ ಎಂದು ಪ್ರಶ್ನಿಸಿದರು.

ಗ್ರಾಹಕರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಬಿ. ರಾಕೇಶ್, ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಪ್ರತಿಮಂಗಳವಾರ ಹೆದ್ದಾರಿ ಕಾಮಗಾರಿ ನೆಪದಲ್ಲಿ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿರುವ ವಿಷಯವೂ ತೀವ್ರ ಚರ್ಚೆಗೆ ಗ್ರಾಸವಾಯಿತು. ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ ಮತ್ತು ಸುರೇಶ್ ಗಿಳಿಯಾರ್ ಮಾತನಾಡಿ ಹೊರಗೆ ಉರಿಯುವ ಬಿಸಿಲು, ಮನೆಯೊಳಗೆ ವಿದ್ಯುತ್ ಇಲ್ಲದ ಸ್ಥಿತಿ. ಹೀಗಿದ್ದರೆ ಕೋಟ ಹೋಬಳಿಯಲ್ಲಿ ಮಂಗಳವಾರವನ್ನು ‘ವಿದ್ಯುತ್ ರಹಿತ ದಿನ’ ಎಂದು ಘೋಷಿಸಿ ಬಿಡಿ ಎಂದು ವ್ಯಂಗ್ಯವಾಡಿದರು.

ಈ ಕುರಿತು ಮುಂದಿನ ದಿನಗಳಲ್ಲಿ ಅನಾವಶ್ಯಕ ವಿದ್ಯುತ್ ವ್ಯತ್ಯಯ ತಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ಇದೇ ವೇಳೆ ಕೋಟ ಹನುಮಾನ್ ಬಟ್ಟೆ ಮಳಿಗೆ ಎದುರಿನ ಟ್ರಾನ್ಸ್‌ಫಾರ್ಮರ್‌ನ್ನು ಗ್ರಾಮಪಂಚಾಯತ್ ಕುಡಿಯುವ ನೀರಿನ ಘಟಕದ ಸಮೀಪ ಸ್ಥಳಾಂತರಿಸಿರುವ ಕ್ರಮಕ್ಕೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸಾರ್ವಜನಿಕರು ಸಂಚರಿಸುವ ಪ್ರದೇಶ ಹಾಗೂ ಕುಡಿಯುವ ನೀರಿನ ಘಟಕದ ಸಮೀಪ ಟಿ.ಸಿ ಅಳವಡಿಸಿರುವುದು ಅಪಾಯಕಾರಿಯಾಗಿದೆ ಎಂದು ಆರೋಪಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಸುರೇಶ್ ಗಿಳಿಯಾರ್ ಮತ್ತು ನಾಗರಾಜ್ ಗಾಣಿಗ ಖಾಸಗಿ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ನಿಯಮ ಉಲ್ಲಂಘಿಸಿ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಒತ್ತುವರಿ ಪ್ರದೇಶದಲ್ಲಿಯೇ ವಿದ್ಯುತ್ ಸಂಪರ್ಕ ನೀಡಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಅಕ್ರಮ ಸಂಪರ್ಕ ಒದಗಿಸಿರುವ ಬಗ್ಗೆ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮೆಸ್ಕಾಂ ಅಧೀಕ್ಷಕರು ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿಗೆ ಸೂಚನೆ ನೀಡಿದರು.

ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಕಾಮಗಾರಿ ಸಂದರ್ಭದಲ್ಲೂ ಡಿವೈನ್ ಪಾರ್ಕ್ ಎದುರು ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆ ಹಾಗೂ ಸಮೀಪದ ಇತರ ಕಟ್ಟಡಗಳ ಬಳಿ ಓಪನ್ ಕೇಬಲ್ ಬಳಕೆಯ ಬಗ್ಗೆ ಪ್ರಶ್ನೆಗಳು ಕೇಳಿಬಂದವು. ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯವೇ? ಎಂದು ನಾಗರಾಜ್ ಗಾಣಿಗ ಪ್ರಶ್ನಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಅಧೀಕ್ಷಕ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕುಂದಾಪುರ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್, ಲೆಕ್ಕಾಧಿಕಾರಿ ಶಿವಕುಮಾರ್, ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ, ತಾಂತ್ರಿಕ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ಹಾಗೂ ವಿವಿಧ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.