



ಡೈಲಿವಾರ್ತೆ: 20/ಮೇ/2026


ಸಾಸ್ತಾನ: ಬೈಕ್ ಡಿಕ್ಕಿಗೆ ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ದುರ್ಮರಣ

ಕೋಟ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪಾರಡೈಸ್ ಹೋಟೆಲ್ ಸಮೀಪ ನಡೆದಿದೆ.
ಮೃತರನ್ನು ರಾಘವೇಂದ್ರ ಉಪಾಧ್ಯಾಯ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನಲೆ:
ಮೇ 19ರಂದು ಸಂಜೆ ಸುಮಾರು 7:35ರ ವೇಳೆಗೆ ರಾಘವೇಂದ್ರ ಉಪಾಧ್ಯಾಯ ಅವರು ಉಡುಪಿ, ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಅಂಚಿನಲ್ಲಿ ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಕುಂದಾಪುರದತ್ತ ಬರುತ್ತಿದ್ದ ಬೈಕ್‌ನ್ನು ಭರತ್ ಎಂಬಾತ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಘವೇಂದ್ರ ಉಪಾಧ್ಯಾಯರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಭರತ್ ಹಾಗೂ ರಾಘವೇಂದ್ರ ಉಪಾಧ್ಯಾಯ ಇಬ್ಬರೂ ರಸ್ತೆಗೆ ಬಿದ್ದಿದ್ದು, ರಾಘವೇಂದ್ರ ಅವರ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ರಕ್ತಗಾಯಗಳಾಗಿವೆ.
ತಕ್ಷಣ ಗಾಯಾಳುವನ್ನು ಅಂಬ್ಯುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 106ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.