



ಡೈಲಿವಾರ್ತೆ: 20/ಮೇ/2026


ಕುಂದಾಪುರದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್‌ನ 12ನೇ ಶಾಖೆ ಮೇ 22ರಂದು ಲೋಕಾರ್ಪಣೆ

ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲೊಂದಾದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ 12ನೇ ಶಾಖೆಯನ್ನು ಕುಂದಾಪುರದಲ್ಲಿ ಆರಂಭಿಸುತ್ತಿದ್ದು, ನೂತನ ಸಂಪೂರ್ಣ ಹವಾನಿಯಂತ್ರಿತ ಶಾಖೆಯ ಉದ್ಘಾಟನಾ ಸಮಾರಂಭ ಮೇ 22ರಂದು ಬೆಳಗ್ಗೆ 10.30ಕ್ಕೆ ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಹೋಟೆಲ್ ಸಮೀಪದ ಶ್ರೀ ನಂದಿಕೇಶ್ವರ ಟವರ್ಸ್‌ನಲ್ಲಿ ನಡೆಯಲಿದೆ.
ಈ ಕುರಿತು ಬುಧವಾರ ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ ಶೆಟ್ಟಿ ಇಂದ್ರಾಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
107 ವರ್ಷಗಳ ಇತಿಹಾಸ ಹೊಂದಿರುವ ಈ ಸಹಕಾರ ಸಂಘವು ಕಳೆದ ನಾಲ್ಕು ದಶಕಗಳಿಂದ ಲಾಭದಾಯಕ ಆಡಳಿತ ವ್ಯವಸ್ಥೆಯ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಪ್ರಸ್ತುತ ಸಂಘದಲ್ಲಿ 23 ಸಾವಿರಕ್ಕೂ ಅಧಿಕ ಸದಸ್ಯರಿದ್ದು, 662 ಕೋಟಿ ರೂ. ಠೇವಣಿ, 528 ಕೋಟಿ ರೂ. ಸದಸ್ಯರ ಸಾಲ ಹೊರಬಾಕಿ, 113.24 ಕೋಟಿ ರೂ. ನಿಧಿ ಹಾಗೂ 284.07 ಕೋಟಿ ರೂ. ಹೂಡಿಕೆ ಹೊಂದಿದೆ. ಸಂಘದ ದುಡಿಯುವ ಬಂಡವಾಳ 795 ಕೋಟಿ ರೂ. ಆಗಿದ್ದು, 2025-26ನೇ ಸಾಲಿನಲ್ಲಿ 4,062.29 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 18.13 ಕೋಟಿ ರೂ. ಲಾಭ ದಾಖಲಿಸಿದೆ.
ಸಂಸ್ಥೆಯ 11 ಶಾಖೆಗಳ ಪೈಕಿ 9 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕುಂದಾಪುರದಲ್ಲಿ ಆರಂಭವಾಗುತ್ತಿರುವುದು ಸಂಸ್ಥೆಯ ಮೊದಲ ಶಾಖೆಯಾಗಿದೆ ಎಂದು ತಿಳಿಸಲಾಯಿತು.
ಸಂಘವು ಪ್ರತಿವರ್ಷ ಸುಮಾರು 25 ಲಕ್ಷ ರೂ. ಮೊತ್ತವನ್ನು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಮೀಸಲಿಡುತ್ತಿದೆ. ಪಾರದರ್ಶಕ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯ ಸ್ನೇಹಿ ಯೋಜನೆಗಳ ಮೂಲಕ ಈಗಾಗಲೇ ವ್ಯಾಪಕ ಮೆಚ್ಚುಗೆ ಪಡೆದಿರುವ ಸಂಸ್ಥೆ, ‘ಚೇತನಾ’ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನೂ ಪರಿಚಯಿಸಿದೆ.
ನೂತನ ಕುಂದಾಪುರ ಶಾಖೆಯಲ್ಲಿ ಆಕರ್ಷಕ ಠೇವಣಿ ಯೋಜನೆಗಳು, ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳು, ಸೇಫ್ ಲಾಕರ್ ವ್ಯವಸ್ಥೆ, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ಆರೋಗ್ಯ ಕಾರ್ಡ್, ವಿಮಾ ಸೇವೆಗಳು ಹಾಗೂ ಮೊಬೈಲ್ ಮೂಲಕ ದೈನಿಕ ಠೇವಣಿ ಸಂಗ್ರಹ ವ್ಯವಸ್ಥೆ ಲಭ್ಯವಿರಲಿದೆ. ಉದ್ಘಾಟನಾ ಪ್ರಯುಕ್ತ ವಿಶೇಷ ಠೇವಣಿ ಬಡ್ಡಿದರ ಯೋಜನೆಯನ್ನೂ ಸಂಸ್ಥೆ ಘೋಷಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಹಾಗೂ ಕುಂದಾಪುರ ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ಉಪಸ್ಥಿತರಿದ್ದರು.