ಡೈಲಿವಾರ್ತೆ: 21/ಮೇ/2026

ಕೋಡಿಬೆಂಗ್ರೆ ಆಳಸಮುದ್ರದಲ್ಲಿ ಬೋಟು ಮುಳುಗಡೆ: 6 ಮೀನುಗಾರರ ರಕ್ಷಣೆ, ₹65 ಲಕ್ಷ ನಷ್ಟ

ಮಲ್ಪೆ, ಮೇ 21: ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟೊಂದು ಕೋಡಿಬೆಂಗ್ರೆ ಸಮೀಪ ಸಮುದ್ರ ಮಧ್ಯೆ ಮುಳುಗಡೆಯಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದ್ದು, ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಮತ್ತೊಂದು ಬೋಟಿನ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಮುಳುಗಡೆಯಾದ ಬೋಟು ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಅವರಿಗೆ ಸೇರಿದ “ಸಾಯಿದತ್ತ” ಹೆಸರಿನ ಆಳಸಮುದ್ರ ಬೋಟಾಗಿದ್ದು, ಮೇ 17ರಂದು ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.

ಬೋಟಿನ ತಾಂಡೇಲರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ ಹಾಗೂ ಕಾರ್ಮಿಕರಾದ ರೋಹಿದಾಸ್ ಮೊಗೇರ, ಶಾಮ ಸುಂದರ್ ಮಲೀಕ್, ಉಜ್ವಲ್ ಮಲೀಕ್, ಸತ್ಯಜಿತ್ ಮಲೀಕ್ ಮತ್ತು ತ್ರಿಲೇಶ್ ಭಾಸ್ಕರ್ ರಕ್ಷಿಸಲ್ಪಟ್ಟ ಮೀನುಗಾರರು ಎಂದು ತಿಳಿದುಬಂದಿದೆ.

ಮೇ 19ರಂದು ಸಂಜೆ ಸುಮಾರು 4.30ರ ವೇಳೆಗೆ ಕೋಡಿಬೆಂಗ್ರೆ ಸಮುದ್ರ ವ್ಯಾಪ್ತಿಯಲ್ಲಿ ಸುಮಾರು 38 ಮೀಟರ್ ಆಳದ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ, ಬೋಟಿನ ಹಿಂಭಾಗದ ಅಡಿಭಾಗಕ್ಕೆ ಯಾವುದೋ ಭಾರವಾದ ವಸ್ತು ತಾಗಿದಂತೆ ಭಾರೀ ಶಬ್ದ ಕೇಳಿಬಂದಿದೆ. ಅನುಮಾನಗೊಂಡ ತಾಂಡೇಲ ರಾಘವೇಂದ್ರ ಬೋಟಿನ ಒಳಭಾಗ ಪರಿಶೀಲಿಸಿದಾಗ, ಬೋಟಿನೊಳಗೆ ವೇಗವಾಗಿ ನೀರು ನುಗ್ಗುತ್ತಿರುವುದು ಗೋಚರಿಸಿದೆ.

ತಕ್ಷಣ ಸಮೀಪದಲ್ಲಿದ್ದ “ಶ್ರೀ ಅಮ್ಮ ಭವಾನಿ” ಬೋಟಿನ ಸಹಾಯ ಪಡೆಯಲಾಗಿದ್ದು, ಬೋಟಿನೊಳಗೆ ನುಗ್ಗುತ್ತಿದ್ದ ನೀರನ್ನು ಹೊರಹಾಕಲು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬೋಟಿನಲ್ಲಿದ್ದ ಎಲ್ಲಾ ಮೀನುಗಾರರನ್ನು ಸುರಕ್ಷಿತವಾಗಿ ಮತ್ತೊಂದು ಬೋಟಿಗೆ ಸ್ಥಳಾಂತರಿಸಲಾಯಿತು.

ನಂತರ ಮುಳುಗಡೆಯಾಗುತ್ತಿದ್ದ “ಸಾಯಿದತ್ತ” ಬೋಟನ್ನು ಮಲ್ಪೆ ಬಂದರಿಗೆ ಎಳೆದುಕೊಂಡು ಬರುವ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅಮ್ಮ ಭವಾನಿ ಬೋಟಿನ ಹಿಂಭಾಗದ ಕಂಬ ತುಂಡಾದ ಪರಿಣಾಮ ನಿಯಂತ್ರಣ ತಪ್ಪಿದ ಬೋಟು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಡೆಯಾಯಿತು.

ಘಟನೆಯಲ್ಲಿ ಬೋಟಿನಲ್ಲಿದ್ದ ಮೀನು, ಬಲೆ, ಡೀಸೆಲ್ ಸೇರಿದಂತೆ ಸುಮಾರು ₹65 ಲಕ್ಷ ಮೌಲ್ಯದ ಆಸ್ತಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.