ಡೈಲಿವಾರ್ತೆ: 22/ಮೇ/2026

ಧಾರವಾಡ: 11 ವರ್ಷದ ಬಾಲಕನಿಗೆ ಮುಸುಕುಧಾರಿಗಳಿಂದ ಇಂಜೆಕ್ಷನ್ ಚುಚ್ಚಿದ ಆರೋಪ; ಗ್ರಾಮಸ್ಥರಲ್ಲಿ ಆತಂಕ, ತನಿಖೆ ಚುರುಕು

​ಹುಬ್ಬಳ್ಳಿ: ಮನೆಯಲ್ಲಿ ಒಬ್ಬನೇ ಆಟವಾಡುತ್ತಿದ್ದ 11 ವರ್ಷದ ಬಾಲಕನಿಗೆ ಬೈಕ್‌ನಲ್ಲಿ ಬಂದ ಅಪರಿಚಿತ ಮುಸುಕುಧಾರಿಗಳಿಬ್ಬರು ಬಲವಂತವಾಗಿ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದಾಗಿ ನೆಲಗುಡ್ಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಂಜೆಕ್ಷನ್‌ಗೆ ಒಳಗಾದ ಬಾಲಕನನ್ನು ಮಣಿಕಂಠ ಗಾಣಿಗೇರ (11) ಎಂದು ಗುರುತಿಸಲಾಗಿದೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ರಕ್ತದ ಪರೀಕ್ಷೆ ಹಾಗೂ ಎಕ್ಸ್-ರೇ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಗುತ್ತಿದೆ.​

ಘಟನೆಯ ಹಿನ್ನೆಲೆ:​ ಬಾಲಕ ಮಣಿಕಂಠ ನೀಡಿದ ಹೇಳಿಕೆಯ ಪ್ರಕಾರ ಮಧ್ಯಾಹ್ನ ತಂದೆ-ತಾಯಿ ಕೆಲಸದ ನಿಮಿತ್ತ ಹೊಲಕ್ಕೆ ಹೋಗಿದ್ದಾಗ ನಾನು ಮನೆಯಲ್ಲಿ ಒಬ್ಬನೇ ಇದ್ದೆ. ಈ ವೇಳೆ ಬೈಕ್‌ನಲ್ಲಿ ಮುಸುಕು ಧರಿಸಿ ಬಂದ ಇಬ್ಬರು ವ್ಯಕ್ತಿಗಳು, ಹೆತ್ತವರ ಬಗ್ಗೆ ವಿಚಾರಿಸಿದರು. ಅವರು ಹೊಲಕ್ಕೆ ಹೋಗಿರುವುದಾಗಿ ಉತ್ತರಿಸುತ್ತಿದ್ದಂತೆ, ಏಕಾಏಕಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಾನು ಅವರಿಂದ ತಪ್ಪಿಸಿಕೊಳ್ಳಲು ಕಚ್ಚಲು ಪ್ರಯತ್ನಿಸಿದಾಗ, ನನ್ನ ಬಾಯಿಯನ್ನು ಒತ್ತಿ ಹಿಡಿದು ಎಡಗೈಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾದರು. ಇದರಿಂದ ನಾನು ಸ್ವಲ್ಪ ಸಮಯ ಮೂರ್ಛೆ ಹೋಗಿದ್ದೆ. ಸಂಜೆ ಪೋಷಕರು ಮನೆಗೆ ಬಂದ ತಕ್ಷಣ ವಿಷಯ ತಿಳಿಸಿದೆ ಎಂದು ವಿವರಿಸಿದ್ದಾನೆ.​

ನನ್ನ ಮಗ ತನಗೆ ಇಂಜೆಕ್ಷನ್ ಮಾಡಿರುವುದಾಗಿ ಪದೇ ಪದೇ ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಇದರಿಂದ ಹೆದರಿ ನಾವು ತಕ್ಷಣ ಆತನನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದೆವು. ನಂತರ ವೈದ್ಯರ ಸೂಚನೆ ಮೇರೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದೇವೆ ಎಂದು ಬಾಲಕನ ತಾಯಿ ಸುಜಾತಾ ತಿಳಿಸಿದ್ದಾರೆ.​

ಮೂಡಿದ ಹಲವು ಅನುಮಾನಗಳು:

​ ಘಟನೆ ಗ್ರಾಮೀಣ ಭಾಗದಲ್ಲಿ ಭೀತಿ ಹುಟ್ಟಿಸಿದ್ದರೂ, ಬಾಲಕನ ಹೇಳಿಕೆಗಳ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಮಧ್ಯಾಹ್ನದ ವೇಳೆ ಗ್ರಾಮಕ್ಕೆ ಅಪರಿಚಿತರು ಬೈಕ್‌ನಲ್ಲಿ ಬಂದು ಹೋಗಿರುವುದನ್ನು ಗ್ರಾಮದ ಬೇರೆ ಯಾರೂ ನೋಡಿಲ್ಲ.​ಗ್ರಾಮದ ಬೇರೆ ಯಾವುದೇ ಮಕ್ಕಳಿಗೆ ಈ ರೀತಿಯ ಇಂಜೆಕ್ಷನ್ ಮಾಡಲು ಯಾರು ಬಂದಿಲ್ಲ ಎಂದು ಪೋಷಕರ ವಿಚಾರಣೆಯಿಂದ ತಿಳಿದುಬಂದಿದೆ.​

ಗುರುತುಗಳಿಲ್ಲ: ಬಾಲಕನ ಕೈ ಮೇಲೆ ಇಂಜೆಕ್ಷನ್ ಚುಚ್ಚಿರುವ ಯಾವುದೇ ಸ್ಪಷ್ಟ ಗುರುತುಗಳು ಪ್ರಾಥಮಿಕವಾಗಿ ಪತ್ತೆಯಾಗಿಲ್ಲ.​ಕಿಮ್ಸ್ ವೈದ್ಯರ ಪ್ರಕಾರ, ಸದ್ಯ ಬಾಲಕನ ಆರೋಗ್ಯದಲ್ಲಿ ಯಾವುದೇ ವ್ಯತಿರಿಕ್ತ ಬದಲಾವಣೆಗಳು ಅಥವಾ ವಿಷದ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ತಪಾಸಣೆ ಮುಂದುವರಿಸಲಾಗಿದೆ. ಇತ್ತ ಘಟನೆಯ ಅಸಲಿಯತ್ತನ್ನು ಭೇದಿಸಲು ಕುಂದಗೋಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಈ ಘಟನೆಯ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ.