ಡೈಲಿವಾರ್ತೆ: 09/ಜು./2026

ಉಡುಪಿ ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್‌ನಲ್ಲಿ ರಾತ್ರಿ ವೇಳೆ ರಕ್ತ ಮಾರಾಟ ದಂಧೆ? ವೈರಲ್ ಫೋಟೋದಿಂದ ಬಯಲಾಯ್ತು ಕರಾಳ ಮುಖ!

​ಉಡುಪಿ: ಬಡ ರೋಗಿಗಳ ಜೀವ ಉಳಿಸಬೇಕಾದ ಉಡುಪಿಯ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಇದೀಗ ಕತ್ತಲಲ್ಲಿ ನಡೆಯುವ ರಕ್ತದ ದಂಧೆಯ ಕೇಂದ್ರವಾಗಿ ಮಾರ್ಪಟ್ಟಿದೆಯೇ ಎನ್ನುವ ದಿಗಿಲು ಮೂಡಿಸುವ ಸಂಶಯವೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್‌ನಿಂದ ರಾತ್ರೋರಾತ್ರಿ ಖಾಸಗಿ ಆಸ್ಪತ್ರೆಗಳಿಗೆ ರಕ್ತ ಮಾರಾಟವಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಪುಷ್ಟಿ ನೀಡುವಂತಹ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕತ್ತಲಲ್ಲಿ ನಡೆಯುತ್ತಿದೆಯೇ ರಕ್ತದ ವ್ಯಾಪಾರ? ಯಾವುದೇ ದಾಖಲೆಗಳಿಲ್ಲ!

ಜಿಲ್ಲೆಯ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳು ಬಡವರ ಮತ್ತು ಅಸಹಾಯಕರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಜಿಲ್ಲಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಿಕೊಡುತ್ತವೆ. ಆದರೆ ಸಾರ್ವಜನಿಕರು ಉಚಿತವಾಗಿ ನೀಡಿದ ಈ ರಕ್ತವನ್ನು ಜಿಲ್ಲಾಸ್ಪತ್ರೆಯ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಡುಪಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಕತ್ತಲ ಮರೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂಬ ನಡುಕ ಹುಟ್ಟಿಸುವ ಸತ್ಯ ಸಾರ್ವಜನಿಕರ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ ಎನ್ನಲಾಗಿದೆ.
​ಅಚ್ಚರಿಯ ಮತ್ತು ಆಘಾತಕಾರಿ ವಿಷಯವೆಂದರೆ, ಖಾಸಗಿ ಆಸ್ಪತ್ರೆಗಳಿಗೆ ಈ ರೀತಿ ರಕ್ತವನ್ನು ಸರಬರಾಜು ಮಾಡಿದ ಬಗ್ಗೆ ಯಾವುದೇ ಅಧಿಕೃತ ರಶೀದಿಗಳಾಗಲಿ ಅಥವಾ ದಾಖಲೆಗಳಾಗಲಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲ ಎನ್ನಲಾಗುತ್ತಿದೆ.

ಬಡವರಿಗಿಲ್ಲದ ರಕ್ತ ಖಾಸಗಿಯವರಿಗೆ ಹೇಗೆ ಸಿಗುತ್ತೆ? ಜನರ ಆಕ್ರೋಶ!

ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ರಕ್ತದ ತುರ್ತು ಅಗತ್ಯವಿದ್ದಾಗ ‘ಇಲ್ಲಿ ರಕ್ತವಿಲ್ಲ, ದಾನಿಗಳನ್ನು ಕರೆತನ್ನಿ’ ಎಂದು ಸಬೂಬು ಹೇಳಿ ಕಳುಹಿಸುವ ಇದೇ ಸಿಬ್ಬಂದಿ, ಖಾಸಗಿ ಆಸ್ಪತ್ರೆಯೊಂದಕ್ಕೆ ಯಾವುದೇ ಬದಲಿ ರಕ್ತದಾನಿಗಳಿಲ್ಲದೆ ಒಂದೇ ಬಾರಿಗೆ ಭರ್ಜರಿ 15 ಬಾಟಲ್ ರಕ್ತವನ್ನು ರಾತ್ರಿಯ ಕತ್ತಲಲ್ಲಿ ರವಾನಿಸಿದ್ದಾರೆ!”
​ಈ ದುರ್ನಡೆ ಸಾರ್ವಜನಿಕರ ತೀವ್ರ ನಿದ್ದೆಗೆಡಿಸಿದೆ ಮತ್ತು ಸರ್ಕಾರಿ ವ್ಯವಸ್ಥೆಯ ಮೇಲಿದ್ದ ನಂಬಿಕೆಗೆ ಭಾರಿ ಪೆಟ್ಟು ನೀಡಿದೆ.

ಲೋಕಾಯುಕ್ತ ತನಿಖೆಗೆ ಹೆಚ್ಚಿದ ಒತ್ತಾಯ:
​ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಪಣ ತೊಟ್ಟ ಬೆನ್ನಲ್ಲೇ, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇಂತಹದ್ದೊಂದು ಅಕ್ರಮ ವ್ಯವಹಾರ ನಡೆದಿರುವುದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಈ ಕರಾಳ ದಂಧೆಯಲ್ಲಿ ಜಿಲ್ಲಾ ಸರ್ಜನ್ ಅವರ ಪಾತ್ರವಿದೆಯೇ? ಅಥವಾ ಬ್ಲಡ್ ಬ್ಯಾಂಕ್‌ನ ಸಿಬ್ಬಂದಿಗಳೇ ನೇರವಾಗಿ ಖಾಸಗಿ ಆಸ್ಪತ್ರೆಗಳೊಂದಿಗೆ ರಹಸ್ಯ ‘ಡೀಲ್’ ಮಾಡಿಕೊಂಡಿದ್ದಾರೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
​ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತಕ್ಷಣವೇ ಸುಮಟೋ (Suo Motu) ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಆರೋಗ್ಯ ಸಚಿವರಿಗೆ ನೇರ ಸವಾಲು
​ರಕ್ತದಾನದ ಪಾವಿತ್ರ್ಯತೆಯನ್ನೇ ಗಾಳಿಗೆ ತೂರಿ, ಬಡವರ ರಕ್ತವನ್ನು ಹಣದ ಆಸೆಗೆ ಮಾರಿಕೊಳ್ಳುತ್ತಿರುವ ಈ ದಂಧೆಯ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಮಾಜದ ಮುಂದೆ ಇಡಬೇಕಾಗಿದೆ. ರಾಜ್ಯ ಆರೋಗ್ಯ ಸಚಿವರು ಈ ಕೂಡಲೇ ಮಧ್ಯಪ್ರವೇಶಿಸಿ, ಈ ಹಗರಣದ ತನಿಖೆಗೆ ಆದೇಶಿಸಬೇಕು ಮತ್ತು ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಭ್ರಷ್ಟ ಅಧಿಕಾರಿ ಹಾಗೂ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು ಎಂದು ಸಾರ್ವಜನಿಕ ವಲಯ ಹಾಗೂ ಸಂಘ-ಸಂಸ್ಥೆಗಳು ಉಗ್ರವಾಗಿ ಆಗ್ರಹಿಸಿವೆ.