ಡೈಲಿವಾರ್ತೆ: 23/ಮೇ/2026

ಕುಂದಾಪುರ: ಕೋಡಿ ಸೇತುವೆ ಮೇಲೆ ಯುವಕರ ಅಟ್ಟಹಾಸ – ಸಾರ್ವಜನಿಕ ಶಾಂತಿ ಭಂಗ ಮಾಡಿದ ನಾಲ್ವರ ಬಂಧನ

​ಕುಂದಾಪುರ: ನಗರದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಗಲಾಟೆ ಮಾಡುತ್ತಾ, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

​ಘಟನೆಯ ವಿವರ:
ಮೇ 23ರ ಶನಿವಾರ ರಾತ್ರಿ ಸುಮಾರು 10:00 ಗಂಟೆಯ ಸುಮಾರಿಗೆ ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜಾನಾಯ್ಕ್‌ ಎನ್. ಅವರು ಸಿಬ್ಬಂದಿಯೊಂದಿಗೆ ನಗರದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದರು. ಈ ವೇಳೆ ಕುಂದಾಪುರ ಕಸಬಾ ಗ್ರಾಮದ ಚರ್ಚ್ ರಸ್ತೆಯಿಂದ ಕೋಡಿಗೆ ಸಂಪರ್ಕಿಸುವ ಸೇತುವೆಯ ಮೇಲೆ ದೊಡ್ಡ ಮಟ್ಟದ ಗದ್ದಲ ಕೇಳಿಬಂದಿದೆ.
​ಸೇತುವೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿದ್ದ ವ್ಯಕ್ತಿಗಳು ಅಸಭ್ಯವಾಗಿ ವರ್ತಿಸುತ್ತಾ, ಪರಸ್ಪರ ಕೈಕೈ ಮಿಲಾಯಿಸಿ, ಜೋರಾಗಿ ಬೊಬ್ಬೆ ಹಾಕುತ್ತಾ ದೂಡಾಡಿಕೊಳ್ಳುತ್ತಿದ್ದರು. ಇದರಿಂದ ಆ ಪರಿಸರದಲ್ಲಿ ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗುತ್ತಿರುವುದನ್ನು ಗಮನಿಸಿದ ಉಪನಿರೀಕ್ಷಕರು ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇಲಾಖಾ ಜೀಪನ್ನು ನಿಲ್ಲಿಸಿ ಸಿಬ್ಬಂದಿಯವರ ಸಹಕಾರದೊಂದಿಗೆ ಪೊಲೀಸರು ಗಲಾಟೆ ಮಾಡುತ್ತಿದ್ದವರನ್ನು ಸುತ್ತುವರೆದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರನ್ನು ಕಂಡು ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳದಲ್ಲಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತರನ್ನು ಕಸಬಾ ಗ್ರಾಮದ ನವೀನ, ಕೋಡಿ ನಿವಾಸಿ ಪ್ರಶಾಂತ, ಹಂಗಳೂರು ಗ್ರಾಮದ ವಿಘ್ನೇಶ್‌ ಮತ್ತು ಕೋಡಿ ನಿವಾಸಿ ಗಣೇಶ್‌ ಎಂದು ಗುರುತಿಸಲಾಗಿದೆ. ಪರಾರಿಯಾದವರನ್ನು ಹೂವಿನಹಡಗಲಿ ಮಹೇಶ್‌, ನಿಶಾಂತ ಹಾಗೂ ಇತರರು ಎಂದು ಗುರುತಿಸಲಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸಾರ್ವಜನಿಕ ನೆಮ್ಮದಿಗೆ ಭಂಗ ತಂದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 45/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ: 194(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.