




ಡೈಲಿವಾರ್ತೆ: 25/ಮೇ/2026


ಶೋಕಿ ಜೀವನಕ್ಕಾಗಿ ಸರಗಳ್ಳತನ: ಹನಿಮೂನ್ ಮೂಡ್‌ನಲ್ಲಿದ್ದ ನವವಿವಾಹಿತನ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸ್

ಶಿವಮೊಗ್ಗ: ಮದುವೆಯಾಗಿ ಕೇವಲ ಹತ್ತು ದಿನಗಳೂ ಕಳೆಯುವ ಮುನ್ನವೇ ಶೋಕಿ ಜೀವನದ ವ್ಯಾಮೋಹಕ್ಕೆ ಬಿದ್ದು ಸರಗಳ್ಳತನಕ್ಕಿಳಿದಿದ್ದ ನವವಿವಾಹಿತನೊಬ್ಬನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಮದುವೆಯ ಅಲಂಕಾರ ಇನ್ನೂ ಮಾಸದ ಕಾರಿನಲ್ಲೇ ಬಂದು ಈತ ಕಳ್ಳತನ ಎಸಗುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ: ಮೇ 23ರಂದು ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದ ಬಳಿ ಪ್ರೇಮಿಗಳಿಬ್ಬರು ಕಾರು ನಿಲ್ಲಿಸಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ತನ್ನ ಕಾರಿನಲ್ಲಿ ಬಂದ ಆರೋಪಿ ಮಂಜುನಾಥ್, ಯುವತಿಯ ಕೊರಳಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಈ ಹಠಾತ್ ದಾಳಿಯಿಂದ ಆಘಾತಕ್ಕೊಳಗಾಗಿದ್ದರೂ ಸಹ, ಪ್ರೇಮಿಗಳು ಆರೋಪಿ ಪಲಾಯನಗೈದ ಕಾರಿನ ನಂಬರ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರು.
ಬಲಿಪಶುಗಳಾದ ಪ್ರೇಮಿಗಳು ತಕ್ಷಣವೇ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಕಾರಿನ ನಂಬರ್ ಸಹಿತ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿ, ಕಾರಿನ ಜಾಲದ ಬೆನ್ನುಬಿದ್ದರು. ಕೊನೆಗೂ ತಾಂತ್ರಿಕ ಸೂತ್ರಗಳ ಆಧಾರದ ಮೇಲೆ ಹೈಟೆಕ್ ಕಳ್ಳ ಮಂಜುನಾಥ್‌ನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರನ್ನೇ ಬೆರಗುಗೊಳಿಸಿದ ಕಾರಿನ ಅಲಂಕಾರ: ಆರೋಪಿಯನ್ನು ಬಂಧಿಸಲು ಹೋದ ಪೊಲೀಸರಿಗೆ ಅಲ್ಲಿನ ದೃಶ್ಯ ಕಂಡು ಆಶ್ಚರ್ಯವಾಗಿದೆ. ಕಳ್ಳತನಕ್ಕೆ ಬಳಸಲಾಗಿದ್ದ ಕಾರಿಗೆ ಹತ್ತು ದಿನಗಳ ಹಿಂದೆ ನಡೆದಿದ್ದ ಮದುವೆಯ ಮಂಟಪದ ಅಲಂಕಾರ ಇನ್ನೂ ಹಾಗೇ ಇತ್ತು. ಮದುವೆಯ ಸಡಗರ ಮುಗಿಯುವ ಮುನ್ನವೇ ಈತ ಅಪರಾಧ ಲೋಕಕ್ಕೆ ಮರಳಿದ್ದನ್ನು ಕಂಡು ಅಧಿಕಾರಿಗಳೇ ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರೇಮಿಗಳೇ ಈತನ ಮೊದಲ ಟಾರ್ಗೆಟ್: ಪೊಲೀಸ್ ವಿಚಾರಣೆಯ ವೇಳೆ ಆರೋಪಿಯ ಹಳೇ ಇತಿಹಾಸ ಬಯಲಾಗಿದೆ. ಈ ಮಂಜುನಾಥ್ ನಿರಂತರವಾಗಿ ಐಷಾರಾಮಿ ಜೀವನ ನಡೆಸುವ ಹಂಬಲ ಹೊಂದಿದ್ದ. ಇದೇ ಕಾರಣಕ್ಕಾಗಿ ಈ ಹಿಂದೆ ಕೂಡ ಏಕಾಂತದಲ್ಲಿದ್ದ ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದ ಎನ್ನಲಾಗಿದೆ. ಆದರೆ, ಹಿಂದಿನ ಘಟನೆಗಳಲ್ಲಿ ಯಾರು ದೂರು ನೀಡದ ಕಾರಣ ಈತ ಪಾರಾಗಿದ್ದ. ಸದ್ಯ ಪತ್ನಿಯೊಂದಿಗೆ ಹೊಸ ಜೀವನ ಆರಂಭಿಸಬೇಕಾಗಿದ್ದ ನವವಿವಾಹಿತ, ತನ್ನದೇ ದುರ್ಬುದ್ಧಿಯಿಂದಾಗಿ ಈಗ ಜೈಲು ಕಂಬಿ ಎಣಿಸುವಂತಾಗಿದೆ.