


ಡೈಲಿವಾರ್ತೆ: 09/ಜು./2026


ಬ್ರಹ್ಮಾವರದಲ್ಲಿ ಹಿರಿಯ ಪತ್ರಕರ್ತ ಸೋಮಶೇಖರ್ ಪಡುಕೆರೆಗೆ ‘ಪತ್ರಿಕಾ ದಿನದ ಪುರಸ್ಕಾರ’: ವಿದ್ಯಾರ್ಥಿಗಳು ಲೇಖನಿಯ ಶಕ್ತಿಯಿಂದ ಸಮಾಜದ ಧ್ವನಿಯಾಗಿ – ಸೋಮಶೇಖರ್ ಪಡುಕರೆ

ಬ್ರಹ್ಮಾವರ: ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮತ್ತು ಶಿಸ್ತು ಇರಬೇಕು. ನನಗೆ ದೊಡ್ಡ ಭಾಷಣ ಮಾಡಲು ಬರದಿದ್ದರೂ, ಬರವಣಿಗೆಯ ಮೂಲಕ ಸಮಾಜದ ಧ್ವನಿಯಾಗಲು ಸಾಧ್ಯವಿದೆ. ಪತ್ರಕರ್ತರಷ್ಟೇ ಅಲ್ಲದೆ, ವಿದ್ಯಾರ್ಥಿಗಳೂ ಸಮಾಜದ ಕುಂದುಕೊರತೆಗಳಿಗೆ ಸ್ಪಂದಿಸುವ ನಾಗರಿಕ ಪತ್ರಕರ್ತರಾಗಿ (Citizen Journalists) ಕೆಲಸ ಮಾಡಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸೋಮಶೇಖರ್ ಪಡುಕೆರೆ ಕರೆ ನೀಡಿದರು.

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ‘ಪತ್ರಿಕಾ ದಿನದ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಪತ್ರಿಕೋದ್ಯಮದ ಸಾರ್ಥಕ ಕ್ಷಣವನ್ನು ನೆನಪಿಸಿಕೊಂಡ ಸೋಮಶೇಖರ್ ಅವರು, “2010 ರಲ್ಲಿ ರೋಡ್ ರೋಲರ್ ಓಡಿಸುತ್ತಾ, ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ ನಂದಗುಡಿ ಎಂಬ ಪ್ರತಿಭಾವಂತ ಕ್ರಿಕೆಟರನ ಬಗ್ಗೆ ನಾನು ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ವಿಶೇಷ ಲೇಖನ ಬರೆದಿದ್ದೆ. ಇದನ್ನು ಗಮನಿಸಿದ ಪ್ರಕಾಶ್ ಪಡುಕೋಣೆ ಮತ್ತು ರಾಹುಲ್ ದ್ರಾವಿಡ್ ಅವರ ಜಂಟಿ ಕ್ರೀಡಾ ಅಕಾಡೆಮಿಯವರು ಆತನನ್ನು ಸಂಪರ್ಕಿಸಿದರು. ರಾಹುಲ್ ದ್ರಾವಿಡ್ ಅವರು ಆ ಲೇಖನದಲ್ಲಿದ್ದ ಫೋಟೋ ಹಾಗೂ ಆತನ ಸಾಧನೆಯನ್ನು ಕಂಡು ಅಕಾಡೆಮಿಯಲ್ಲಿ ಸಹಾಯಕ ತರಬೇತುದಾರನ ಉದ್ಯೋಗ ನೀಡಿದರು. ಇಂದು ಆ ವಿಜಯ್ ಸ್ವಂತ ಕಾಲಿನ ಮೇಲೆ ನಿಂತು, ಕಾರು ಖರೀದಿಸಿ ನನಗೆ ಕೃತಜ್ಞತೆ ಸಲ್ಲಿಸಲು ಫೋನ್ ಮಾಡಿದ್ದ. ನನಗೆ ಕ್ರೀಡಾ ತಾರೆ ಸಚಿನ್ ತೆಂಡೂಲ್ಕರ್ ಅವರ ಸಂದರ್ಶನ ಮಾಡಿದ್ದಕ್ಕಿಂತಲೂ, ಒಬ್ಬ ಬಡ ಯುವಕನ ಬದುಕಿಗೆ ದಾರಿದೀಪವಾದ ಇಂತಹ ಘಟನೆಗಳೇ ಜೀವನದಲ್ಲಿ ಅತ್ಯಂತ ಹೆಮ್ಮೆ ಮತ್ತು ತೃಪ್ತಿ ತಂದಿವೆ ಎಂದು ಭಾವುಕರಾಗಿ ನುಡಿದರು.
ಇದೇ ವೇಳೆ ಇಂದಿನ ಪತ್ರಿಕೋದ್ಯಮದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮಾಧ್ಯಮ ಸಂಸ್ಥೆಗಳು ಅಸ್ತಿತ್ವ ಉಳಿಸಿಕೊಳ್ಳಲು ರಾಜಿ ಮಾಡಿಕೊಳ್ಳುತ್ತಿರುವ ಇಂದಿನ ಆತಂಕದ ಸ್ಥಿತಿಯಲ್ಲೂ ತಾವು ಕ್ರೀಡಾ ಪತ್ರಿಕೋದ್ಯಮದಲ್ಲಿ ಮುಕ್ತವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಜೊತೆಗೆ, ವಿದ್ಯಾರ್ಥಿಗಳು ಮುಂಜಾನೆ ಬೇಗ ಎದ್ದು ಓಟ (Jogging) ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮದ ಜವಾಬ್ದಾರಿ ಹಿರಿದು: ಡಾ. ರಮೇಶ್ ಶೆಟ್ಟಿ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಷ್ಟೇ ಮಹತ್ವದ ಪಾತ್ರವನ್ನು ನಾಲ್ಕನೇ ಅಂಗವಾದ ಪತ್ರಿಕೋದ್ಯಮ ರಂಗ ನಿರ್ವಹಿಸುತ್ತಿದೆ. ಇಂದಿನ ಸುಳ್ಳು ಸುದ್ದಿಗಳ ಸುಳಿಯ ನಡುವೆ ಸಾರ್ವಜನಿಕರಿಗೆ ನೈಜ ಮತ್ತು ವಿಶ್ವಾಸಾರ್ಹ ಸುದ್ದಿಯನ್ನು ತಲುಪಿಸುವುದೇ ಪತ್ರಕರ್ತರ ಮುಂದಿರುವ ದೊಡ್ಡ ಸವಾಲಾಗಿದೆ ಎಂದರು.
ಹಿಂದೆ ಗುಜರಾತ್ ಭೂಕಂಪದ ಸಂದರ್ಭವಿರಲಿ ಅಥವಾ ಇಂದಿನ ಇರಾನ್, ಇಸ್ರೇಲ್ ಯುದ್ಧ ಭೂಮಿಯಿರಲಿ; ಪತ್ರಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ಸತ್ಯವನ್ನು ಜಗತ್ತಿಗೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಮಾಧ್ಯಮ ರಂಗದಲ್ಲಿ ಇಂದು ಯುವಜನತೆಗೆ ಉಜ್ವಲ ಭವಿಷ್ಯವಿದ್ದು, ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ವಿಫುಲ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪತ್ರಿಕೆಗಳ ಓದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ: ಭರತ್ ಶೆಟ್ಟಿ

ಸುಜ್ಞಾನ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹಾಗೂ ಕನಿಷ್ಠ ಪಕ್ಷ ದೂರದರ್ಶನದಲ್ಲಿ ವಾರ್ತೆಗಳನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದ ಸ್ಪಷ್ಟ ಪರಿಕಲ್ಪನೆ ಸಿಗಲು ಮತ್ತು ನಿಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕಳೆದ 5 ವರ್ಷಗಳಿಂದ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಮಾಧ್ಯಮ ಮಿತ್ರರನ್ನು ಶ್ಲಾಘಿಸಿದ ಅವರು, ಪತ್ರಕರ್ತರ ಸಂಘಕ್ಕೆ ಸಂಸ್ಥೆಯ ಕಡೆಯಿಂದ ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದರು.
ಯುವಜನತೆ ಮಾಧ್ಯಮ ರಂಗದತ್ತ ಆಸಕ್ತಿ ಬೆಳೆಸಿಕೊಳ್ಳಿ: ರಾಜೇಶ್ ಗಾಣಿಗ ಅಚ್ಲಾಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಗಾಣಿಗ ಅಚ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಕರ್ತರು ಜವಾಬ್ದಾರಿಯುತವಾಗಿ ಸಕಾಲದಲ್ಲಿ ಕಾರ್ಯಕ್ರಮಗಳಿಗೆ ಆಗಮಿಸಿ, ಅವು ಮುಗಿಯುವವರೆಗೂ ಇದ್ದು ವರದಿ ಮಾಡುತ್ತಾರೆ. ಪತ್ರಿಕಾ ಕ್ಷೇತ್ರ, ಪತ್ರಕರ್ತರ ಸೇವೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೌಲ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.
1843 ಜುಲೈ 1 ರಂದು ಮಂಗಳೂರಿನಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಉದಯಿಸಿದ ಸವಿನೆನಪಿನಲ್ಲಿ ಈ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇಂದಿನ ಡಿಜಿಟಲ್ ಹಾಗೂ ಟಿವಿ ಮಾಧ್ಯಮಗಳ ಯುಗದಲ್ಲಿ ಯುವಕರು ಹೆಚ್ಚಾಗಿ ಮಾಧ್ಯಮ ರಂಗದ ಕಡೆಗೆ ಆಸಕ್ತಿ ಮೂಡಿಸಿಕೊಂಡರೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ ಎಂದ ಅವರು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾಧ್ಯಮ ರಂಗದ ಸವಾಲು ಮತ್ತು ಅವಕಾಶಗಳ ಕುರಿತು ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ 2026ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಕರಾವಳಿಯ ಹೆಮ್ಮೆಯ ಹಿರಿಯ ಕ್ರೀಡಾ ವರದಿಗಾರ ಸೋಮಶೇಖರ್ ಪಡುಕೆರೆ (ಪ್ರಸ್ತುತ ‘ಸ್ಪೋರ್ಟ್ಸ್ ಮೈಂಡ್’ ವೆಬ್ ಸೈಟ್ ಮುನ್ನಡೆಸುತ್ತಿರುವವರು) ಅವರಿಗೆ ಗಣ್ಯರ ಸಮ್ಮುಖದಲ್ಲಿ ‘ಪತ್ರಿಕಾ ದಿನದ ಪುರಸ್ಕಾರ’ ನೀಡಿ ಭವ್ಯವಾಗಿ ಗೌರವಿಸಲಾಯಿತು.




ಕಾರ್ಯಕ್ರಮದಲ್ಲಿ ಪತ್ರಕರ್ತ ಮೋಹನ ಉಡುಪ ಅತಿಥಿಗಳನ್ನು ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಅವರು ಸೋಮಶೇಖರ ಪಡುಕೆರೆ ಅವರ ಸನ್ಮಾನ ಪತ್ರವನ್ನು ವಾಚಿಸಿದರು.
ವೇದಿಕೆಯಲ್ಲಿ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಪತ್ರಕರ್ತರಾದ ಪ್ರವೀಣ್ ಮುದ್ದೂರು, ಶಿವರಾಮ್ ಆಚಾರ್ ಬಂಡಿಮಠ, ಇಬ್ರಾಹಿಂ ಕೋಟ, ಉದಯ ಆಚಾರ್, ಪ್ರವೀಣ್, ಗಣೇಶ್ ಸಾೖಬ್ರಕಟ್ಟೆ ಹಾಗೂ ಸುಜ್ಞಾನ ವಿದ್ಯಾ ಸಂಸ್ಥೆಯ ಅಧ್ಯಾಪಕ ವೃಂದ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪತ್ರಕರ್ತ ಚಂದ್ರಶೇಖರ್ ಬಿಜಾಡಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.