




ಡೈಲಿವಾರ್ತೆ: 25/ಮೇ/2026


ಬಿ.ಸಿ.ರೋಡ್ : ಬಂಟ್ವಾಳ ಕಾಂಗ್ರೆಸ್ ನಿಂದ ಬಿಜೆಪಿ ವಿರುದ್ಧ ಪ್ರತಿಭಟನೆ

ಬಂಟ್ವಾಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್ ಎಸ್ ಯು ಐ ಮತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ದ ಬೃಹತ್ ಪ್ರತಿಭಟನೆ ಮಾಜಿ ಸಚಿವ, ಕ್ಷೇತ್ರದ ಮಾಜಿ ಶಾಸಕ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸೋಮವಾರ ಬಿ.ಸಿ.ರೋಡಿನ ಪ್ಲೈ ಓವರ್ ಕೆಳಭಾಗದಲ್ಲಿ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಯುಪಿಎ ಸರಕಾರ ಇರುವಾಗ ಹಾಗೂ ಬಿಜೆಪಿ ಎನ್‌ಡಿಎ ಸರಕಾರದ ಅವಧಿಯಲ್ಲಿ ದೇಶದಲ್ಲಿ ಕೇವಲ ದರ ಕುಸಿಯುವುದು ಮಾತ್ರ ಅಲ್ಲ, ದೇಶದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ, ಬಿಜೆಪಿ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದರೂ ಕೂಡ ಜನರಿಗೆ ಹೊರೆಯಾಗದಂತೆ ಸುಲಭವಾಗಿ ಸಿಗುವಂತೆ ಮಾಡಿದೆ. ಆದರೆ ಇವತ್ತು ನಿರಂತರವಾಗಿ ದುರುದ್ದೇಶದಿಂದ ಬೆಲೆ ಏರಿಕೆ ಮಾಡುತ್ತಾ ಇದೆ ಎಂದರು. ಬಿಜೆಪಿ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಮಾಡುತ್ತಿದೆ. ಯಥಾಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಜಾಯಮಾನ ನಮ್ಮದಾಗಬೇಕು, ಬಡವರ ಕಿಸೆಯಿಂದ ತೆಗೆದು ಶ್ರೀಮಂತರ ಕಿಸೆಗೆ ಹಾಕುವುದು ಬಿಜೆಪಿ ಇತಿಹಾಸವಾದರೆ, ಶ್ರೀಮಂತರ ಕಿಸೆಯಿಂದ ಬಡವರ ಕಿಸೆಗೆ ಹಾಕುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಅವರು ಹೇಳಿದರು. ಮೋದಿ ಏನು ಮಾಡಿದರೂ ಸರಿ ಎನ್ನುವ ಭಕ್ತರು, ಮೂರ್ಖರು ಇಲ್ಲಿ ಇದ್ದಾರೆ ಎಂದು ಲೇವಡಿ ಮಾಡಿದರು. ರಾಹುಲ್ ಗಾಂಧಿ ಅವರಿಗೆ ಒಮ್ಮೆ ಅವಕಾಶ ಮಾಡಿಕೊಡಿ, ಯಾವ ರೀತಿ ಆಡಳಿತ ಮಾಡುತ್ತಾರೆ ಎಂಬುದನ್ನು ನೋಡುವ ಅವಕಾಶ ನೀಡಿ ಎಂದು ವಿನಂತಿಸಿದ ಅವರು ಅವಿದ್ಯಾವಂತ ಹೆಬ್ಬೆಟ್ಟು ಒತ್ತುವವರು ಬಿಜೆಪಿಯಲ್ಲಿ ಮಂತ್ರಿಗಳಾಗುತ್ತಿದ್ದಾರೆ, ಇದರಿಂದ ದೇಶಕ್ಕೆ ಕೇಡು ಎಂದ ಅವರು ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಒಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದ್ದು, ಪ್ರಶ್ನೆ ಕೇಳುವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಒಡೆದು ಆಳುವ ನೀತಿ ಬಿಜೆಪಿಯದ್ದು, ಬಿಜೆಪಿ ಪಕ್ಷವು ಹೆಣ ಹಾಕಿ ಮತ ಪಡೆಯವಂತಹ ನೀಚ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿಹೋದರೆ, ದೇಶದ ಪ್ರಧಾನಿ ವಿದೇಶ ಪ್ರವಾಸದಲ್ಲಿ ಮೋಜು ಮಾಡುತ್ತಿದ್ದಾರೆ, ಕೇಂದ್ರ ಸರಕಾರದ ಜನವಿರೋಧಿ ಆಡಳಿತ ದೇಶವನ್ನು ಆರ್ಥಿಕವಾಗಿ ಹಿನ್ನಡೆಗೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್, ಎನ್ಎಸ್ ಯು ಐ ಅಧ್ಯಕ್ಷ ಸಫ್ವಾನ್ ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಸುಹೈಲ್ ಖಂದಕ್ ಮಂಗಳೂರು, ಪದ್ಮನಾಭ ರೈ, ಸುದೀಪ್‌ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಸುಧಾಕರ ಶೆಣೈ ಖಂಡಿಗ, ಫೌಝಿಯಾ ಸಜಿಪ ಮೂಡ, ಶಬಾನಾ ಕಾವಳಕಟ್ಟೆ, ಸಚಿನ್ ಬೆಳ್ಳಾರೆ, ಮಧುಸೂದನ್, ಶೈಲಜಾ ರಾಜೇಶ್, ಮಹಮ್ಮದ್ ನಂದಾವರ, ಮೋಹನ್ ಶೆಟ್ಟಿ, ಸಿದ್ದೀಕ್ ಸರವು, ಸಿರಾಜ್ ಮದಕ, ಯೂಸುಫ್ ಕರಂದಾಡಿ, ಸಮದ್ ಕೈಕಂಬ, ಜೋಸ್ಮಿನ್ ಡಿಸೋಜಾ, ಜೆಸಿಂತಾ ಡಿಸೋಜಾ, ಮಹಮ್ಮದ್ ಶರೀಫ್ ಶಾಂತಿ ಅಂಗಡಿ, ಸಿದ್ದೀಕ್ ಗುಡ್ಡೆಅಂಗಡಿ, ಕುಶಲ ಎಂ.ಪೆರಾಜೆ, ವೆಂಕಪ್ಪ ಪೂಜಾರಿ, ನಿರಂಜನ್ ರೈ, ಸತೀಶ್ ಪೂಜಾರಿ ಕೊಪ್ಪರಿಗೆ ಮತ್ತಿತರರು ಉಪಸ್ಥಿತರಿದ್ದರು.