




ಡೈಲಿವಾರ್ತೆ: 30/ಮೇ/2026


96 ರನ್‌ಗಳ ಹೋರಾಟವೂ ವ್ಯರ್ಥ; ರಾಜಸ್ಥಾನ್ ಕನಸು ಭಗ್ನ, ಕಣ್ಣೀರಲ್ಲಿ ಮುಳುಗಿದ ವೈಭವ್ ಸೂರ್ಯವಂಶಿ

ಮುಲ್ಲನ್‌ಪುರ, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಅನುಭವಿಸಿದ ಸೋಲು ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಭಾರೀ ನಿರಾಸೆ ತಂದಿತು.
ತಂಡದ ಸೋಲಿನೊಂದಿಗೆ ಟೂರ್ನಿಯಲ್ಲಿನ ರಾಜಸ್ಥಾನ್ ರಾಯಲ್ಸ್‌ನ ಅಭಿಯಾನ ಅಂತ್ಯಗೊಂಡಿದ್ದು, ಡಗೌಟ್‌ನಲ್ಲಿ ಕುಳಿತಿದ್ದ ಸೂರ್ಯವಂಶಿ ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯಗಳು ಅಭಿಮಾನಿಗಳ ಮನಕಲಕುವಂತಾಗಿವೆ.

ಪಂದ್ಯ ಮುಗಿದ ಬಳಿಕ ನಿರಾಸೆಯಿಂದ ಕುಗ್ಗಿದ ಸೂರ್ಯವಂಶಿ ತಮ್ಮ ಭಾವನೆಗಳನ್ನು ಮರೆಮಾಚಲು ಮೊದಲು ಕ್ಯಾಪ್ ಹಾಗೂ ನಂತರ ಟವಲ್ ಬಳಸಿದರೂ, ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರ ನೋವನ್ನು ಗಮನಿಸಿದ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸಮಾಧಾನಪಡಿಸಲು ಮುಂದಾದರು. ಈ ವೇಳೆ ಹಿರಿಯ ಆಟಗಾರ ರವೀಂದ್ರ ಜಡೇಜಾ ಸೇರಿದಂತೆ ಹಲವರು ಯುವ ಆಟಗಾರನಿಗೆ ಧೈರ್ಯ ತುಂಬುತ್ತಿರುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 9 ರನ್‌ಗಳಷ್ಟರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೇಲ್ ವಿಕೆಟ್ ಕಳೆದುಕೊಂಡು ತಂಡ ಒತ್ತಡಕ್ಕೆ ಒಳಗಾಗಿತ್ತು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಬಂದ ವೈಭವ್ ಸೂರ್ಯವಂಶಿ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟವಾಡಿ ತಂಡಕ್ಕೆ ಆಸರೆಯಾಗಿದ್ದರು. ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದ ಅವರು ಕೇವಲ ನಾಲ್ಕು ರನ್‌ಗಳ ಅಂತರದಲ್ಲಿ ಶತಕ ವಂಚಿತರಾಗಿ 96 ರನ್‌ಗಳಿಗೆ ಔಟಾದರು. ಅವರ ಸಾಹಸಮಯ ಇನ್ನಿಂಗ್ಸ್ ರಾಜಸ್ಥಾನ್‌ಗೆ ಸ್ಪರ್ಧಾತ್ಮಕ ಮೊತ್ತ ತಂದುಕೊಟ್ಟರೂ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
215 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಭರ್ಜರಿ ಆರಂಭ ಒದಗಿಸಿದರು. ವಿಶೇಷವಾಗಿ ಗಿಲ್ ಕೇವಲ 53 ಎಸೆತಗಳಲ್ಲಿ 104 ರನ್‌ಗಳ ಅಮೋಘ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಎದುರು ರಾಜಸ್ಥಾನ್ ಬೌಲರ್‌ಗಳು ಪರಿಣಾಮಕಾರಿಯಾಗಿ ತಡೆಯೊಡ್ಡಲು ವಿಫಲರಾದರು.
ಪಂದ್ಯದ ಫಲಿತಾಂಶ ರಾಜಸ್ಥಾನ್ ರಾಯಲ್ಸ್‌ಗೆ ನಿರಾಸೆ ತಂದಿದ್ದರೂ, ವೈಭವ್ ಸೂರ್ಯವಂಶಿಯ ಹೋರಾಟಮಯ ಇನ್ನಿಂಗ್ಸ್ ಹಾಗೂ ತಂಡದ ಮೇಲಿನ ಅವರ ಬದ್ಧತೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸೋಲಿನ ನೋವಿನಲ್ಲಿ ಕಣ್ಣೀರಿಟ್ಟ ಯುವ ಆಟಗಾರನ ದೃಶ್ಯಗಳು ಈ ಟೂರ್ನಿಯ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.