ಡೈಲಿವಾರ್ತೆ: 29/ಮೇ/2026

ಬೈಂದೂರು: ಕ್ರಿಕೆಟ್ ವೈಷಮ್ಯದ ಪ್ರತೀಕಾರ – ಆಯುಧಗಳೊಂದಿಗೆ ಮನೆಗೆ ನುಗ್ಗಿ ಕೊಲೆ ಬೆದರಿಕೆ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಂದೂರು, ಮೇ 29: ಒಂದು ವರ್ಷದ ಹಿಂದೆ ಕ್ರಿಕೆಟ್ ಆಟದ ವಿಚಾರವಾಗಿ ಆರಂಭವಾದ ವೈಷಮ್ಯ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಮನೆಗೆ ನುಗ್ಗಿ ಆಯುಧಗಳೊಂದಿಗೆ ಬೆದರಿಕೆ ಹಾಕಿದ ಆರೋಪದಡಿ ನಾಲ್ವರು ಸೇರಿದಂತೆ ಇತರರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಳಿಹೊಳೆ ಗ್ರಾಮದ ಶಿವರಾಜ್ ಶೆಟ್ಟಿ (38) ಅವರು ನೀಡಿದ ದೂರಿನ ಪ್ರಕಾರ, ಆರೋಪಿ ಪ್ರತಾಪ್ ಶೆಟ್ಟಿ ಹಾಗೂ ಅವರ ನಡುವೆ ಸುಮಾರು ಒಂದು ವರ್ಷದ ಹಿಂದೆ ಕ್ರಿಕೆಟ್ ಆಟದ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್ ಶೆಟ್ಟಿ ಅವರು ಪ್ರತಾಪ್ ಶೆಟ್ಟಿಯನ್ನು ತಮ್ಮಿಂದ ದೂರವಿರಿಸಿದ್ದರು. ಬಳಿಕ ಪ್ರತಾಪ್ ಶೆಟ್ಟಿ ಅವರು ಪಿರ್ಯಾದಿದಾರರ ಬಗ್ಗೆ ಹಗುರವಾಗಿ ಮಾತನಾಡುತ್ತಾ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ದೂರಿನ ಪ್ರಕಾರ, ಮೇ 27ರಂದು ರಾತ್ರಿ ಸುಮಾರು 11.15 ಗಂಟೆಗೆ ಪ್ರತಾಪ್ ಶೆಟ್ಟಿ ತನ್ನ ಸಹಚರರಾದ ರಾಜು, ವಿಷ್ನೇಶ್ ಗಾಣಿಗ, ಪ್ರಸಾದ್ ಆಚಾರಿ ಹಾಗೂ ಇತರರನ್ನು ಜತೆಗಿಟ್ಟುಕೊಂಡು ಕಾರು ಮತ್ತು ಮೋಟಾರ್ ಸೈಕಲ್‌ಗಳಲ್ಲಿ ಶಿವರಾಜ್ ಶೆಟ್ಟಿ ಅವರ ಮನೆಗೆ ಆಗಮಿಸಿದ್ದಾರೆ. ಆರೋಪಿಗಳು ಮನೆಯ ಕಂಪೌಂಡ್ ಒಳಗೆ ಅತಿಕ್ರಮ ಪ್ರವೇಶ ಮಾಡಿ, ಕೈಯಲ್ಲಿ ಕಬ್ಬಿಣದ ರಾಡ್ ಸೇರಿದಂತೆ ಇತರ ಆಯುಧಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಿವರಾಜ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 329(3), 352, 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.