


ಡೈಲಿವಾರ್ತೆ: 21/ಜು./2026


ಮಂದಿರ-ಮಸೀದಿ-ಚರ್ಚ್‌ಗೆ ಸಚಿವ ಯು.ಟಿ. ಖಾದರ್ ಭೇಟಿ:
“ಬಾರ್ಕೂರು ಭಾರತದ ಸೌಹಾರ್ದ ಸಂಸ್ಕೃತಿಯ ಜೀವಂತ ಪ್ರತೀಕ” – ಯು.ಟಿ. ಖಾದರ್

ಬ್ರಹ್ಮಾವರ, ಜು.21: ಇತಿಹಾಸ ಪ್ರಸಿದ್ಧ ಬಾರ್ಕೂರು ಭಾರತದ ಸರ್ವಧರ್ಮ ಸಮಭಾವ, ಸಂಸ್ಕೃತಿ ಹಾಗೂ ಸಹಬಾಳ್ವೆಯ ಜೀವಂತ ಪ್ರತೀಕವಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಬಾರ್ಕೂರಿನ ಐತಿಹಾಸಿಕ ಪಂಚಲಿಂಗೇಶ್ವರ ದೇವಸ್ಥಾನ, ಮಾಲಿಕ್ ದಿನಾರ್ ಜುಮ್ಮಾ ಮಸೀದಿ ಹಾಗೂ ಐತಿಹಾಸಿಕ ಸೆಂಟ್ ಪೀಟರ್ ಚರ್ಚ್ ಗಳಿಗೆ ಭೇಟಿ ನೀಡಿ ವಿವಿಧ ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಾರ್ಕೂರು ಅನೇಕ ರಾಜರು, ಆಡಳಿತಗಳು ಹಾಗೂ ಕಾಲಘಟ್ಟಗಳನ್ನು ಕಂಡಿದ್ದರೂ, ಇಲ್ಲಿನ ಸೌಹಾರ್ದ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳು ಅಚಲವಾಗಿ ಉಳಿದಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕರ್ನಾಟಕದ ಅತ್ಯಂತ ಪುರಾತನ ಜುಮ್ಮಾ ಮಸೀದಿಗಳಲ್ಲಿ ಒಂದಾದ ಮಾಲಿಕ್ ದಿನಾರ್ ಮಸೀದಿಯ ಪಕ್ಕದಲ್ಲೇ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಐತಿಹಾಸಿಕ ಚರ್ಚ್ ನೆಲೆಸಿರುವುದು ಭಾರತದ ಬಹುಸಂಸ್ಕೃತಿಯ ಪರಂಪರೆಗೆ ಸಾಕ್ಷಿಯಾಗಿದೆ. ಬಾರ್ಕೂರು ಕೇವಲ ಐತಿಹಾಸಿಕ ಪಟ್ಟಣವಲ್ಲ ಪ್ರೀತಿ, ವಿಶ್ವಾಸ, ಸಹೋದರತ್ವ ಮತ್ತು ಸಹಬಾಳ್ವೆಯನ್ನು ಪೀಳಿಗೆಯಿಂದ ಪೀಳಿಗೆಗೆ ಉಳಿಸಿಕೊಂಡು ಬಂದ ಪುಣ್ಯಭೂಮಿಯಾಗಿದೆ ಎಂದು ಅವರು ಹೇಳಿದರು.

ಯುವಜನತೆ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು. ಸಮಾಜದಲ್ಲಿ ಮುನ್ನಡೆದವರು ಇತರರನ್ನು ಕೈಹಿಡಿದು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಪ್ರೀತಿ, ವಿಶ್ವಾಸ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆ ಯುವಪೀಳಿಗೆಯದ್ದಾಗಿದೆ ಎಂದು ಸಚಿವರು ಕರೆ ನೀಡಿದರು.



ಬಾರ್ಕೂರು ಸೇರಿದಂತೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಸಹಕಾರ ಮುಂದುವರಿಯಲಿದೆ ಎಂದು ಭರವಸೆ ನೀಡಿದ ಅವರು, ಮತ್ತೊಮ್ಮೆ ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿ ಜನರೊಂದಿಗೆ ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಆಶಯ ವ್ಯಕ್ತಪಡಿಸಿದರು.

ಧಾರ್ಮಿಕ ಕ್ಷೇತ್ರಗಳಲ್ಲಿ ಸನ್ಮಾನ: ಮಾಲಿಕ್ ದಿನಾರ್ ಜುಮ್ಮಾ ಮಸೀದಿಯಲ್ಲಿ ಸಚಿವರನ್ನು ಆಡಳಿತ ಮಂಡಳಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮುಬಾರಕ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಐತಿಹಾಸಿಕ ಸೆಂಟ್ ಪೀಟರ್ ಚರ್ಚ್‌ಗೆ ಭೇಟಿ ನೀಡಿದ ಸಚಿವರಿಗೆ ಧರ್ಮಗುರು ರೇನೊಲ್ಡ್ ಮಿರಾಂಡ ಸನ್ಮಾನ ಸಲ್ಲಿಸಿದರು. ಈ ವೇಳೆ ಚರ್ಚ್ ಆಡಳಿತ ಮಂಡಳಿಯಿಂದ ಬಾರ್ಕೂರು ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಮನವಿ ಸಲ್ಲಿಸಲಾಯಿತು.



ಜೀರ್ಣೋದ್ಧಾರಗೊಳ್ಳಲಿರುವ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಸಂಪ್ರದಾಯಬದ್ಧವಾಗಿ ಬರಮಾಡಿಕೊಂಡರು. ಬಳಿಕ ವಿಶೇಷ ಪೂಜೆ ಸಲ್ಲಿಸಿ ಸಚಿವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಶಾಂತಾರಾಮ ಶೆಟ್ಟಿ ಬಾರ್ಕೂರು, ರಮೇಶ್ ಭಟ್ ನಾಯರ್‌ಬೆಟ್ಟು, ರಾಮಚಂದ್ರ ಕಾಮತ್, ಬ್ರಹ್ಮಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಜಿ.ಪಂ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಮಂಜಯ್ಯ ಹೆಗ್ಡೆ, ಪ್ರವೀಣ್ ಆಚಾರ್ಯ, ರಮಾನಂದ ಶೆಟ್ಟಿ, ಶ್ರೀಧರ ಪಿ.ಎಸ್., ತಾಲೂಕು ಗ್ಯಾರಂಟಿ ಸಮಿತಿಯ ಸುನಿತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ದೇಗುಲ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ದಾಮೋದರ ಶರ್ಮ, ಆಡಳಿತ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬಾರ್ಕೂರು ರಸ್ತೆ, ತಾಲೂಕು ಆಸ್ಪತ್ರೆ ಕುರಿತು ಭರವಸೆ:

ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಬಾರ್ಕೂರು ಮುಖ್ಯರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ ಎಂದು ಹೇಳಿದರು.
ಬ್ರಹ್ಮಾವರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಸರ್ಕಾರದ ಗಮನ ಸೆಳೆದು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್, ಡೆಂಗ್ಯೂ ಬಗ್ಗೆ ಆತಂಕ ಬೇಡ:
ಕೋವಿಡ್ ಪಾಸಿಟಿವ್ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಜನರು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೆಲವೊಂದು ವೈರಸ್‌ಗಳು ಪರಿಸರದಲ್ಲಿ ಸಹಜವಾಗಿ ಇರುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ ಹಾಗೂ ಸ್ವಚ್ಛತೆಯನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.
ಡೆಂಗ್ಯೂ, ಎಚ್1ಎನ್1 ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ. ವಿಮಾನ ನಿಲ್ದಾಣಗಳಲ್ಲಿ ಅಗತ್ಯ ತಪಾಸಣೆ ಮತ್ತು ಸ್ಕ್ರೀನಿಂಗ್ ನಡೆಯುತ್ತಿದೆ. ಸಾರ್ವಜನಿಕರು ಸೊಳ್ಳೆಗಳ ಉತ್ಪತ್ತಿ ತಡೆಯುವಲ್ಲಿ ಜಾಗರೂಕರಾಗಬೇಕು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಡೆಂಗ್ಯೂ ಲಸಿಕೆ ಅಭಿವೃದ್ಧಿ ಕುರಿತು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದ್ದು, ಈ ಸಂಬಂಧ ಸಭೆಗಳನ್ನು ನಡೆಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.