ಡೈಲಿವಾರ್ತೆ: 12/ಜೂ./2026

ಕೊಲ್ಲೂರಿಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಕರವೇಯಿಂದ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ, ಉಡುಪಿಯಲ್ಲಿ ಹೈ ಅಲರ್ಟ್!

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠವಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ಭೇಟಿ ನೀಡಲಿದ್ದಾರೆ. ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಇನ್ನೊಂದೆಡೆ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲು ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿರುವುದರಿಂದ ಜಿಲ್ಲಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ.

​ದೇವಿಯ ದರ್ಶನ ಮತ್ತು ವಿಶೇಷ ಪೂಜೆ:
ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ.ಜಿ. ರಾಮಚಂದ್ರನ್ (MGR) ಹಾಗೂ ಜೆ. ಜಯಲಲಿತಾ ಅವರ ಭೇಟಿಯ ಬಳಿಕ, ಇದೀಗ ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ವಿಶೇಷ ಕುತೂಹಲ ಮೂಡಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯ ಒಳಗಿನ ಅವಧಿಯಲ್ಲಿ ಸಿಎಂ ವಿಜಯ್ ಅವರು ಮೂಕಾಂಬಿಕಾ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಸಾಧ್ಯತೆಯಿದೆ. ತಮಿಳುನಾಡು ಪೊಲೀಸರ ವಿಶೇಷ ತಂಡ ಈಗಾಗಲೇ ಕೊಲ್ಲೂರಿನಲ್ಲಿ ಬೀಡುಬಿಟ್ಟಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಿದೆ. ಉಡುಪಿ ಜಿಲ್ಲಾ ಪೊಲೀಸರು ಜಂಟಿಯಾಗಿ ದೇವಸ್ಥಾನದ ಸುತ್ತಮುತ್ತ ರಕ್ಷಣಾ ಕವಚ ನಿರ್ಮಿಸಿದ್ದಾರೆ.

​ಭಕ್ತರಿಗೆ ದರ್ಶನ ಸ್ಥಗಿತ ಆಡಳಿತ ಮಂಡಳಿ ಮನವಿ:

ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಇಂದು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸ್ಪಷ್ಟಪಡಿಸಿದೆ. ತೀವ್ರತರದ ವಿವಿಐಪಿ (VVIP) ಭದ್ರತಾ ವ್ಯವಸ್ಥೆ ಇರುವುದರಿಂದ, ಭದ್ರತೆಯ ದೃಷ್ಟಿಯಿಂದ ಭಕ್ತಾದಿಗಳು ಇಂದು ದರ್ಶನಕ್ಕೆ ಬರದಂತೆ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದೆ.

​ಮೇಕೆದಾಟು ಕಿಚ್ಚು: ಕಪ್ಪು ಬಾವುಟದ ಭೀತಿ!

ಇದೆಲ್ಲದರ ನಡುವೆ, ಕರ್ನಾಟಕದ ಜೀವನದಿಯಾದ ಕಾವೇರಿ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ನಿರಂತರವಾಗಿ ಅಡ್ಡಿಪಡಿಸುತ್ತಿರುವ ನಿಲುವು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನೇರ ಪರಿಣಾಮ ಸಿಎಂ ವಿಜಯ್ ಭೇಟಿಯ ಮೇಲಾಗುವ ಲಕ್ಷಣಗಳು ಕಾಣಿಸುತ್ತಿವೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣವು ತಮಿಳುನಾಡು ಸಿಎಂಗೆ ಉಡುಪಿ ಜಿಲ್ಲೆಯ ಗಡಿಯ ಮೂಲಕ ಕೊಲ್ಲೂರಿಗೆ ತೆರಳುವ ಮಾರ್ಗ ಮಧ್ಯೆ ಕಪ್ಪು ಬಾವುಟ ಪ್ರದರ್ಶಿಸಿ ತೀವ್ರ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

​ಇತಿಹಾಸ ಮರುಕಳಿಸಿದ ಕ್ಷಣ:
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವು ತಮಿಳುನಾಡಿನ ರಾಜಕೀಯ ನಾಯಕರೊಂದಿಗೆ ದಶಕಗಳ ಇತಿಹಾಸವನ್ನು ಹೊಂದಿದೆ. ತಮಿಳುನಾಡಿನ ಮಾಜಿ ಸಿಎಂ ಎಂಜಿಆರ್ ಅವರು ದೇವಿಗೆ ಭಕ್ತಿಯ ಕಾಣಿಕೆಯಾಗಿ ಸಮರ್ಪಿಸಿದ್ದ ಚಿನ್ನದ ಖಡ್ಗವನ್ನು ಇಂದಿಗೂ ದೇವಸ್ಥಾನದ ಉತ್ಸವಗಳಲ್ಲಿ ಬಳಸಲಾಗುತ್ತಿದೆ. ಅದೇ ರೀತಿ 2004ರಲ್ಲಿ ಜ್ಯೋತಿಷಿಗಳ ಸಲಹೆಯಂತೆ ಭೇಟಿ ನೀಡಿದ್ದ ಜೆ. ಜಯಲಲಿತಾ ಅವರು ದೇವಸ್ಥಾನಕ್ಕೆ ಭಾರಿ ದೇಣಿಗೆ ನೀಡಿ, ಚಂಡಿಕಾ ಹೋಮ ನೆರವೇರಿಸಿದ್ದರು. ಇದೀಗ ಸಿಎಂ ಜೋಸೆಫ್ ವಿಜಯ್ ಕೂಡ ಅದೇ ಹಾದಿಯಲ್ಲಿ ಮೂಕಾಂಬಿಕೆಯ ಸನ್ನಿಧಿಗೆ ಶರಣಾಗುತ್ತಿದ್ದು, ಇಡೀ ದಕ್ಷಿಣ ಭಾರತದ ರಾಜಕೀಯ ಮತ್ತು ಧಾರ್ಮಿಕ ವಲಯದ ಕಣ್ಣು ಇಂದು ಕೊಲ್ಲೂರಿನ ಮೇಲೆ ನೆಟ್ಟಿದೆ.