ಡೈಲಿವಾರ್ತೆ: 12/ಜೂ./2026

ಬೀದರ್: ಮಾವಿನ ಹಣ್ಣು ಸೇವಿಸಿ ಇಬ್ಬರು ಸಹೋದರಿಯರು ಸಾವು – ಮೂವರ ಸ್ಥಿತಿ ಗಂಭೀರ

​ಬೀದರ್: ಮಾವಿನ ಹಣ್ಣು ಸೇವಿಸಿದ ಬೆನ್ನಲ್ಲೇ ತಾಯಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಹೋದರಿಯರು ದುರಂತ ಅಂತ್ಯ ಕಂಡಿರುವ ಕರುಣಾಜನಕ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಸಂಭವಿಸಿದೆ.


​ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ನಿವಾಸಿಗಳಾದ ಭವಾನಿ ವೈಜಿನಾಥ ಮೇತ್ರೆ (17) ಮತ್ತು ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ದುರ್ದೈವಿ ಬಾಲಕಿಯರು. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

​ಘಟನೆಯ ಹಿನ್ನೆಲೆ:
​ಮೂರು ದಿನಗಳ ಹಿಂದೆ ಶೆಂಬೆಳ್ಳಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಊಟದ ಬಳಿಕ ಕುಟುಂಬದವರೆಲ್ಲರೂ ಸೇರಿ ಮಾವಿನ ಹಣ್ಣು ತಿಂದಿದ್ದಾರೆ. ಆದರೆ, ಹಣ್ಣು ತಿಂದ ಕೆಲವೇ ಸಮಯದ ಬಳಿಕ ತಾಯಿ ಇಂದುಮತಿ ಹಾಗೂ ಅವರ ಐವರು ಹೆಣ್ಣುಮಕ್ಕಳಲ್ಲಿ ತೀವ್ರ ಸ್ವರೂಪದ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಎಲ್ಲರೂ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
​ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿ, ತಕ್ಷಣವೇ ಅಸ್ವಸ್ಥಗೊಂಡ ಎಲ್ಲರನ್ನೂ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಭವಾನಿ ಮತ್ತು ಸಂಧ್ಯಾರಾಣಿ ಸಾವನ್ನಪ್ಪಿದ್ದಾರೆ.

​ಚೇತರಿಸಿಕೊಳ್ಳುತ್ತಿರುವ ತಾಯಿ-ಮಗಳು:
​ಸದ್ಯ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಹೋದರಿ ವಿಜಯಶ್ರೀ (19) ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅದೃಷ್ಟವಶಾತ್ ತಾಯಿ ಇಂದುಮತಿ ಹಾಗೂ ವಿಜಯಶ್ರೀ ಅವರ ಆರೋಗ್ಯ ಸ್ಥಿತಿ ಸದ್ಯ ಸುಧಾರಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

​ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತ ಬಾಲಕಿಯರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಾವಿನ ಹಣ್ಣಿನಲ್ಲಿ ರಾಸಾಯನಿಕ ಮಿಶ್ರಣವಾಗಿತ್ತೇ ಅಥವಾ ಫುಡ್ ಪಾಯ್ಸನಿಂಗ್ (ಆಹಾರ ವಿಷಪೂರಿತ) ಕಾರಣದಿಂದ ಈ ದುರಂತ ಸಂಭವಿಸಿದೆಯೇ ಎಂಬ ನಿಖರ ಮಾಹಿತಿ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಬೆಳಕಿಗೆ ಬರಬೇಕಿದೆ.
​ಈ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದೇ ಮನೆಯ ಇಬ್ಬರು ಹೆಣ್ಣುಮಕ್ಕಳು ಅಕಾಲಿಕ ಮರಣಕ್ಕೀಡಾಗಿರುವುದು ಶೆಂಬೆಳ್ಳಿ ಗ್ರಾಮದಲ್ಲಿ ಭಾರೀ ಶೋಕದ ವಾತಾವರಣ ನಿರ್ಮಿಸಿದೆ.