ಡೈಲಿವಾರ್ತೆ: 12/ಜೂ./2026

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಭೇಟಿ; ದೇವಿಗೆ 1.6 ಕೆಜಿ ಬೆಳ್ಳಿ ಖಡ್ಗ ಸಮರ್ಪಣೆ

​ಕೊಲ್ಲೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸಿ. ಜೋಸೆಫ್‌ ವಿಜಯ್‌ ಅವರು, ಇಂದು ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

​ಸಾಂಪ್ರದಾಯಿಕ ಸ್ವಾಗತ ಹಾಗೂ ಶಿಷ್ಟಾಚಾರ ಪಾಲನೆ:
​ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಗಳನ್ನು ಆಡಳಿತ ಮಂಡಳಿಯ ಟ್ರಸ್ಟಿಗಳು ಹೂಗುಚ್ಛ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಅರ್ಚಕ ವೃಂದದವರು ಮಂತ್ರಘೋಷಗಳೊಂದಿಗೆ ಸಿಎಂ ಅವರನ್ನು ಕ್ಷೇತ್ರದೊಳಗೆ ಬರಮಾಡಿಕೊಂಡರು. ದೇವಸ್ಥಾನದ ಧಾರ್ಮಿಕ ನಿಯಮಾವಳಿಗಳಿಗೆ ಗೌರವ ಸೂಚಿಸಿದ ಸಿಎಂ ವಿಜಯ್‌ ಅವರು, ಸಾಂಪ್ರದಾಯಿಕ ಶಲ್ಯ ಧರಿಸುವ ಮೂಲಕ ಕ್ಷೇತ್ರದ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಿದರು.

​ವಿಶೇಷ ಕಾಣಿಕೆ ಮತ್ತು ಮಹಾಪೂಜೆ:

​ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ಜರುಗಿದವು. ಮುಖ್ಯಮಂತ್ರಿ ವಿಜಯ್‌ ಅವರು ಶಕ್ತಿ ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲಗಳನ್ನು ಅರ್ಪಿಸಿ, ಸುಮಾರು ಅರ್ಧ ಗಂಟೆಗಳ ಕಾಲ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ತಮ್ಮ ರಾಜಕೀಯ ಹಾಗೂ ವೈಯಕ್ತಿಕ ‘ವಿಜಯ’ದ ಪ್ರತೀಕವಾಗಿ ದೇವಿಗೆ 1 ಕೆಜಿ 600 ಗ್ರಾಂ ತೂಕದ ಭವ್ಯ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದರು ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಬಾಬು ಹೆಗಡೆ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

​​ಅಭಿಮಾನಿಗಳ ಜಮಾವಣೆ
ಭದ್ರತಾ ಸಿಬ್ಬಂದಿ ಹರಸಾಹಸ:
ತಮ್ಮ ನೆಚ್ಚಿನ ನಟ ಹಾಗೂ ನೆರೆಯ ರಾಜ್ಯದ ಮುಖ್ಯಮಂತ್ರಿಯನ್ನು ನೋಡಲು ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಾರ್ವಜನಿಕರು ಮುಗಿಬಿದ್ದರು. ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಮುಖ್ಯಮಂತ್ರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಹಾಗೂ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಸಾಕಷ್ಟು ಹರಸಾಹಸ ಪಡಬೇಕಾಯಿತು. ಪೂಜಾ ವಿಧಿವಿಧಾನಗಳ ಮುಕ್ತಾಯದ ನಂತರ ಮುಖ್ಯಮಂತ್ರಿ ವಿಜಯ್‌ ಅವರು ಕೊಲ್ಲೂರಿನಿಂದ ನಿರ್ಗಮಿಸಿದರು.