ಡೈಲಿವಾರ್ತೆ: 12/ಜೂ./2026

ಕೋಟ: ಷೇರು ಹೂಡಿಕೆ ಹೆಸರಿನಲ್ಲಿ ಲಾಭದ ಆಸೆ ತೋರಿಸಿ ₹84 ಲಕ್ಷ ದೋಚಿದ ಆರೋಪಿ – ವಿಡಿಯೋ ಮಾಡಿ ಬೆದರಿಸಿ ನಿರಂತರ ಅತ್ಯಾಚಾರ, ಕಾಮುಕನ ಬಂಧನ!

ಕೋಟ: ವಾಟ್ಸಾಪ್ ಮೂಲಕ ಪರಿಚಯ ಬೆಳೆಸಿಕೊಂಡ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಗೆ ಅಧಿಕ ಲಾಭದ ಆಮಿಷವೊಡ್ಡಿ ಸುಮಾರು ₹84 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಿದಲ್ಲದೆ, ಬಳಿಕ ಅತ್ಯಾಚಾರ ನಡೆಸಿ ವಿಡಿಯೋ ಆಧರಿಸಿ ಬ್ಲ್ಯಾಕ್‌ಮೇಲ್ ಮಾಡಿರುವ ಗಂಭೀರ ಆರೋಪ ಉಡುಪಿ ಜಿಲ್ಲೆಯ ಕೋಟ ಸಮೀಪ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಬ್ರಹ್ಮಾವರ ತಾಲೂಕಿನ ಕೂರಾಡಿ ಶಾಲೆ ಸಮೀಪದ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ಸಂತೋಷ್ ಪೂಜಾರಿ (39) ವಿರುದ್ಧ ಆರೋಪ ಕೇಳಿಬಂದಿದೆ.

ಕೋಟದ ನಿವಾಸಿಯಾಗಿರುವ ವಿವಾಹಿತ ಮಹಿಳೆ, ಇಬ್ಬರು ಮಕ್ಕಳ ತಾಯಿ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, 2024ರ ಜುಲೈ ತಿಂಗಳಲ್ಲಿ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಮಹಿಳೆಗೆ ವಾಟ್ಸಾಪ್ ಸಂದೇಶ ಕಳುಹಿಸಲಾಗಿತ್ತು. ಆರಂಭದಲ್ಲಿ ಪ್ರತಿಕ್ರಿಯಿಸದಿದ್ದ ಮಹಿಳೆಗೆ, ಆರೋಪಿ ತನ್ನನ್ನು ಪರಿಚಿತ ವ್ಯಕ್ತಿಯ ಸ್ನೇಹಿತ ಎಂದು ನಂಬಿಸಿ ಮಾತುಕತೆ ಆರಂಭಿಸಿದ್ದಾನೆ ಎನ್ನಲಾಗಿದೆ. ಬಳಿಕ ನಕಲಿ ಹೆಸರಿನಲ್ಲಿ ಖಾತೆ ಸೃಷ್ಟಿಸಿ, ತಾನು ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವುದಾಗಿ ಹೇಳಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ.
ಆರಂಭದಲ್ಲಿ ಮಹಿಳೆ ₹2,000 ಹೂಡಿಕೆ ಮಾಡಿದ ಬಳಿಕ, ಆಕೆಯ ವಿಶ್ವಾಸ ಗಳಿಸುವ ಉದ್ದೇಶದಿಂದ ಆರೋಪಿ ಗೂಗಲ್ ಪೇ ಮೂಲಕ ₹1.91 ಲಕ್ಷಕ್ಕೂ ಅಧಿಕ ಮೊತ್ತವನ್ನು ಹಿಂದಿರುಗಿಸಿದ್ದಾನೆ ಎನ್ನಲಾಗಿದೆ. ಇದರಿಂದ ನಂಬಿಕೆ ಮೂಡಿದ ಮಹಿಳೆಯಿಂದ ವಿವಿಧ ಹಂತಗಳಲ್ಲಿ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ₹84 ಲಕ್ಷಕ್ಕೂ ಅಧಿಕ ಹಣವನ್ನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಮಹಿಳೆಗೆ ಅನುಮಾನ ಮೂಡಿ ಹಣ ವಾಪಸ್ ಕೇಳಿದಾಗ, ಹಣ ಮರಳಿಸುವುದಾಗಿ ಹೇಳಿ ಉಚ್ಚಿಲ ಸಮೀಪದ ಹೋಟೆಲ್ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿರುವುದಾಗಿ ಬೆದರಿಕೆ ಹಾಕಿ, ಅದನ್ನು ಬಹಿರಂಗಪಡಿಸುವುದಾಗಿ ಹೇಳಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.
ಘಟನೆಯನ್ನು ಯಾರಿಗಾದರೂ ತಿಳಿಸಿದರೆ ಮಹಿಳೆಯ ತಾಯಿ ಹಾಗೂ ಮಗಳನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ದಾಖಲಾಗಿದೆ.

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.