



ಡೈಲಿವಾರ್ತೆ: 13/ಜೂ./2026


ತರಗತಿ ನಡೆಯುತ್ತಿದ್ದಾಗಲೇ ಮೇಲ್ಚಾವಣಿ ಕುಸಿತ: ಐವರು ವಿದ್ಯಾರ್ಥಿನಿಯರಿಗೆ ಗಾಯ: ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ!

ಕಲಬುರಗಿ: ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಕಾಲೇಜೊಂದರಲ್ಲಿ ತರಗತಿ ನಡೆಯುತ್ತಿದ್ದ ವೇಳೆಯಲ್ಲೇ ಮೇಲ್ಚಾವಣಿಯ ಸಿಮೆಂಟ್ ಪದರು ಕುಸಿದು ಬಿದ್ದು, ಐವರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಆತಂಕಕಾರಿ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಕಲಬುರಗಿ ನಗರದ ಎಸ್ಪಿ ಕಚೇರಿ ಸಮೀಪದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಈ ಅವಘಡ ನಡೆದಿದೆ.
ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್ ವಿಭಾಗದ ಕೊಠಡಿಯಲ್ಲಿ ಎಂದಿನಂತೆ ತರಗತಿ ನಡೆಯುತ್ತಿತ್ತು. ಈ ವೇಳೆ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೊಠಡಿಯಲ್ಲಿದ್ದರು. ಪಾಠ ಕೇಳುತ್ತಿದ್ದ ಸಂದರ್ಭದಲ್ಲೇ ಮೇಲ್ಚಾವಣಿಯ ಸಿಮೆಂಟ್ ಪದರು ಏಕಾಏಕಿ ಭಾರಿ ಶಬ್ದದೊಂದಿಗೆ ವಿದ್ಯಾರ್ಥಿನಿಯರ ಮೇಲೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಪೂಜಾ, ಸೃಷ್ಟಿ, ನಿಶಾ, ಶೀತಲ್ ಸೇರಿದಂತೆ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ತರಗತಿಯಲ್ಲಿದ್ದ ವಿದ್ಯಾರ್ಥಿನಿಯರು ತೀವ್ರ ಭಯಭೀತರಾಗಿ, ಪ್ರಾಣಭಯದಿಂದ ತರಗತಿಯಿಂದ ಹೊರಗೆ ಓಡಿ ಬರುತ್ತಿರುವ ದೃಶ್ಯಗಳು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆತಂಕ ಮೂಡಿಸಿದೆ.
ಗಾಯಗೊಂಡ ತಕ್ಷಣವೇ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯರನ್ನು ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಾಳು ವಿದ್ಯಾರ್ಥಿನಿಯರ ತಲೆ, ಬೆನ್ನು ಹಾಗೂ ಮೊಣಕೈ ಭಾಗಕ್ಕೆ ಪೆಟ್ಟಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೇಲ್ಚಾವಣಿಯ ಸಿಮೆಂಟ್ ಪದರು ಕಳಚಿ ಬಿದ್ದಿರುವುದರಿಂದ ಐವರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕಟ್ಟಡವನ್ನು 2016ರಲ್ಲಿ ನಿರ್ಮಿಸಲಾಗಿದ್ದು, ಮೇಲ್ನೋಟಕ್ಕೆ ಕಳಪೆ ಕಾಮಗಾರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೇವಲ ಹತ್ತು ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾದ ಸರ್ಕಾರಿ ಕಟ್ಟಡದ ಮೇಲ್ಚಾವಣಿ ಈ ರೀತಿ ಕುಸಿದು ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ಜವಾಬ್ದಾರಿ ಹೊರಬೇಕಾದ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.