ಡೈಲಿವಾರ್ತೆ: 13/ಜೂ./2026

ಕೋಟ: ಹಿರೇಹೊಳೆಯಲ್ಲಿ ಈಜಲು ತೆರಳಿದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ನಾಪತ್ತೆ

ಕೋಟ: ​ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಮ್ತಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲುಜಾರಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ದಾರುಣ ಘಟನೆ ಜೂನ್ 13ರ ಶನಿವಾರ ಸಂಜೆ ಸಂಭವಿಸಿದೆ.

​ಗರಿಕೆಮಠ ನಿವಾಸಿಗಳಾದ ನಾಗರಾಜ್ ಹಾಗೂ ಶಿವಗಾಮಿ ದಂಪತಿಯ ಪುತ್ರ ಸಾಮರಾಜ್ (21) ನಾಪತ್ತೆಯಾದ ದುರ್ದೈವಿ ವಿದ್ಯಾರ್ಥಿ. ಈತ ಸ್ಥಳೀಯ ಇ.ಸಿ.ಆರ್. (ECR) ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

​ಘಟನೆಯ ವಿವರ:
​ಶನಿವಾರ ಸಂಜೆ ಸಾಮರಾಜ್ ತನ್ನ ಕಾಲೇಜಿನ ಎಂಟು ಮಂದಿ ಸ್ನೇಹಿತರೊಂದಿಗೆ ಸೇರಿ ಬೇಳೂರು ಕೋಣಬಗೆ ರೈಲ್ವೆ ಬ್ರಿಡ್ಜ್ ನ ಕೆಳಗಡೆ ಇರುವ ಚಮ್ತಾಡಿಯ ಸುಳಿಗುಂಡಿ ಹಿರೇಹೊಳೆಗೆ ಈಜಲೆಂದು ತೆರಳಿದ್ದನು. ಈ ಸಂದರ್ಭದಲ್ಲಿ ಸಾಮರಾಜ್ ಸೇರಿದಂತೆ ನಾಲ್ವರು ಸ್ನೇಹಿತರು ನದಿಗೆ ಇಳಿಯಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ನದಿಗೆ ಇಳಿಯುವಾಗ ಸಾಮರಾಜ್ ಕಾಲುಜಾರಿ ಆಳವಾದ ನೀರಿಗೆ ಬಿದ್ದಿದ್ದಾನೆ.
ಸಾಮರಾಜ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಕ್ಷಣ ಉಳಿದ ಸ್ನೇಹಿತರು ಆತನನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಸಾಮರಾಜ್ ಕ್ಷಣಾರ್ಧದಲ್ಲಿ ನೀರಿನ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

​ಮುಂದುವರಿದ ಶೋಧ ಕಾರ್ಯ – ನಾಳೆ ಈಶ್ವರ ಮಲ್ಪೆ ತಂಡ ಭಾಗಿ:

​ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುದೀರ್ಘ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ ಕತ್ತಲಾದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿಯ ಸುಳಿವು ಇದುವರೆಗೆ ಲಭ್ಯವಾಗಿಲ್ಲ.
​ನಾಳೆ (ಭಾನುವಾರ) ಮುಂಜಾನೆಯಿಂದಲೇ ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡ ಸ್ಥಳೀಯರೊಂದಿಗೆ ಸೇರಿ ನದಿಯಲ್ಲಿ ವಿಶೇಷ ಶೋಧ ಕಾರ್ಯಾಚರಣೆ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
​ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿ ನದಿಯಲ್ಲಿ ನಾಪತ್ತೆಯಾದ ಘಟನೆಯಿಂದ ಗರಿಕೆಮಠ ಹಾಗೂ ಬೇಳೂರು ಪರಿಸರದಲ್ಲಿ ತೀವ್ರ ಆತಂಕ ಮತ್ತು ವಿಷಾದದ ವಾತಾವರಣ ನಿರ್ಮಾಣವಾಗಿದೆ.