


ಡೈಲಿವಾರ್ತೆ: 15/ಜೂ./2026


ಸಾಗರ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಬಾಲಕ ಹೃದಯಾಘಾತದಿಂದ ಸಾವು

ಶಿವಮೊಗ್ಗ: ಆಟವಾಡುತ್ತಾ ನಗುನಗುತ್ತಾ ಇರಬೇಕಾಗಿದ್ದ ಆರು ವರ್ಷದ ಪುಟ್ಟ ಬಾಲಕನೊಬ್ಬ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿರುವ ಅತ್ಯಂತ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದಲ್ಲಿ ಸಂಭವಿಸಿದೆ.
ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರ, 6 ವರ್ಷದ ತ್ರಿಲೋಕ್ ಜೈನ್ ಮೃತಪಟ್ಟ ದುರ್ದೈವಿ. ಈತ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.ಶನಿವಾರ ಮಧ್ಯಾಹ್ನ ಶಾಲಾ ಅವಧಿ ಮುಗಿಯುವ ಮುನ್ನ, ಎಂದಿನಂತೆ ಬಾಲಕ ತ್ರಿಲೋಕ್ ಜೈನ್ ಶಾಲಾ ಆವರಣದಲ್ಲಿ ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದನು.
ಈ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಆಟದ ಮೈದಾನದಲ್ಲೇ ಆತ ಏಕಾಏಕಿ ಕುಸಿದು ಬಿದ್ದಿದ್ದಾನೆ.ಬಾಲಕ ಪ್ರಜ್ಞೆ ತಪ್ಪಿ ಬಿದ್ದ ತಕ್ಷಣವೇ ಗಾಬರಿಗೊಂಡ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ತರಾತುರಿಯಲ್ಲಿ ಕ್ರಮ ಕೈಗೊಂಡರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಆ ಪುಟ್ಟ ಜೀವ ಕೊನೆಯುಸಿರೆಳೆದಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಬಾಲಕನ ಅಕಾಲಿಕ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.