ಡೈಲಿವಾರ್ತೆ: 15/ಜೂ./2026

ಕುಂದಾಪುರ: ಸರಣಿ ಕಳ್ಳತನ ಪ್ರಕರಣಗಳ ಭೇದಿಸಿದ ಖಾಕಿ – ಗುಜರಾತ್ ಮೂಲದ ಅಂತರರಾಜ್ಯ ಕಳ್ಳ ಪೊಲೀಸ್ ವಶಕ್ಕೆ!

​ಕುಂದಾಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಸರಣಿ ಮನೆ ಕಳವು ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಕುಂದಾಪುರ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಮೂಲದ ಓರ್ವ ಪ್ರಮುಖ ಆರೋಪಿಯನ್ನು ಸಿಸಿಟಿವಿ ಹಾಗೂ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.
​ಬಂಧಿತ ಆರೋಪಿಯನ್ನು ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಸಾವರ್ ಕುಂಡ್ಲ ನಿವಾಸಿ ಲಾಲಾಜಿಬಾಯ್ ಬುದಾಬಾಯ್ ಸೊಲಂಕಿ (37) ಎಂದು ಗುರುತಿಸಲಾಗಿದೆ.

​ಪ್ರಕರಣದ ಹಿನ್ನೆಲೆ:
ಕಳೆದ ಮಾರ್ಚ್ ತಿಂಗಳಲ್ಲಿ ಕುಂದಾಪುರದ ಸಂಗಮ್ ಜಂಕ್ಷನ್ ಸಮೀಪದ ‘ಜೆಎಂಜೆ ವಿಲ್ಲಾ’ ನಿವಾಸದಲ್ಲಿ ಭೀಕರ ಕಳ್ಳತನ ನಡೆದಿತ್ತು. ಮನೆಯ ಮಾಲೀಕರು ಇಲ್ಲದ ಸಮಯ ಸಾಧಿಸಿ ಮುಂಭಾಗದ ಮುಖ್ಯ ಬಾಗಿಲಿನ ಲಾಕ್ ಮುರಿದು ಒಳನುಗ್ಗಿದ್ದ ಖದೀಮರು, ಬೆಡ್‌ರೂಂನ ಕಪಾಟಿನಲ್ಲಿದ್ದ ₹10,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿತ್ತು.
​ಇದೇ ಅವಧಿಯಲ್ಲಿ ಕಸಬ ಗ್ರಾಮದ ವಿನಯ್ ಆಸ್ಪತ್ರೆಯ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ, ಸುಮಾರು ₹20,000 ಮೌಲ್ಯದ ಹೀರೊ ಹೊಂಡಾ ಮೋಟಾರ್ ಸೈಕಲ್ ಕೂಡ ಕಳುವಾಗಿತ್ತು. ಈ ಸರಣಿ ಕಳ್ಳತನಗಳು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದ್ದವು.


ಏಕಕಾಲದಲ್ಲಿ ದಾಖಲಾದ ಈ ಎರಡೂ ಗಂಭೀರ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿದ ಕುಂದಾಪುರ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ತಾಂತ್ರಿಕ ವಿಶ್ಲೇಷಣೆ ಹಾಗೂ ತನಿಖೆಯ ವೇಳೆ ಆರೋಪಿ ಗುಜರಾತ್ ಮೂಲದವನೆಂದು ಪತ್ತೆಯಾಗಿತ್ತು. ಕೃತ್ಯ ಎಸಗಿದ ಬಳಿಕ ಆತ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ದಾಳಿ ನಡೆಸಿದ ಪೊಲೀಸರು, ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

​ತಪ್ಪೊಪ್ಪಿಕೊಂಡ ಆರೋಪಿ – ವಾಹನ ವಶ:
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ಕುಂದಾಪುರ ವ್ಯಾಪ್ತಿಯಲ್ಲಿ ಜೆಎಂಜೆ ವಿಲ್ಲಾ ಮನೆ ಕಳವು ಹಾಗೂ ಆಸ್ಪತ್ರೆ ಮುಂಭಾಗದ ಬೈಕ್ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಆರೋಪಿ ನೀಡಿದ ನಿಖರ ಮಾಹಿತಿಯ ಮೇರೆಗೆ ಕಳವು ಮಾಡಲಾಗಿದ್ದ ಮೋಟಾರ್ ಸೈಕಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

​ಅಂತರರಾಜ್ಯ ಮಟ್ಟದ ಕಳ್ಳತನ ಜಾಲದ ನಂಟಿನ ಶಂಕೆ ವ್ಯಕ್ತವಾಗಿದ್ದು, ಆರೋಪಿಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಈ ಯಶಸ್ವಿ ಕಾರ್ಯಾಚರಣ ನಡೆಸಿದ ಕುಂದಾಪುರ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ