ಡೈಲಿವಾರ್ತೆ: 15/ಜೂ./2026

ಮೈಸೂರು: ಪಬ್‌ನಲ್ಲಿ ಭೀಕರ ಅಗ್ನಿ ಅವಘಡ – ಇಬ್ಬರು ಸಜೀವ ದಹನ, ಏಳು ಜನರಿಗೆ ಗಂಭೀರ ಗಾಯ

​ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ರಿಂಗ್ ರಸ್ತೆ ಸಮೀಪದ ಪಬ್‌ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನಗೊಂಡು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಧೃತಿಗೆಡಿಸುವ ಘಟನೆ ನಡೆದಿದೆ.

​ನಗರದ ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಪ್ರಸಿದ್ಧ ‘ಫಾಕ್ಸ್ ಜೆನ್’ (Foxzen) ಪಬ್‌ನಲ್ಲಿ ಈ ದುರಂತ ಸಂಭವಿಸಿದೆ. ಸಾಹೀನ್ ಮತ್ತು ಪ್ರಕಾಶ್ ಎಂಬುವವರೇ ಅಗ್ನಿ ಕೀಲೆಗೆ ಬಲಿಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಪಬ್‌ನಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪಬ್ ಒಳಗಿದ್ದ ಇಂಟೀರಿಯರ್ ವಿನ್ಯಾಸ ಹಾಗೂ ಇತರೆ ದಹನಕಾರಿ ವಸ್ತುಗಳ ಕಾರಣದಿಂದಾಗಿ, ಬೆಂಕಿ ಕ್ಷಣಾರ್ಧದಲ್ಲೇ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ದಟ್ಟವಾದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಪಬ್ ಅನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದರಿಂದ, ಒಳಗಿದ್ದವರಿಗೆ ತಕ್ಷಣಕ್ಕೆ ಹೊರಬರಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದು, ಪಬ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

​ಘಟನೆಯಲ್ಲಿ ಪಬ್‌ನಲ್ಲಿದ್ದ ಇತರ ಏಳು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಬ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆಯಾದರೂ, ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.