


ಡೈಲಿವಾರ್ತೆ: 15/ಜೂ./2026


ಕುಮಟಾ: ಕಡ್ಲೆ ಕಡಲ ತೀರದಲ್ಲಿ ರೀಲ್ಸ್ ಹುಚ್ಚಿಗೆ ಯುವಕ ಬಲಿ – ಮಹಾರಾಷ್ಟ್ರ ಮೂಲದ ಯುವಕ ಸಮುದ್ರಪಾಲು

ಕಾರವಾರ, ಜೂನ್ 15: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಮತ್ತೊಂದು ಜೀವವನ್ನು ಬಲಿಪಡೆದಿದೆ. ರೀಲ್ಸ್ ಮಾಡಲು ಹೋಗಿ ಯುವಕನೋರ್ವ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಸಂಭವಿಸಿದೆ.
ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ (26) ಸಮುದ್ರದಲ್ಲಿ ಕೊಚ್ಚಿಹೋದ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.
ಪ್ರವಾಸಕ್ಕೆ ಬಂದಿದ್ದ ಸ್ನೇಹಿತರು:
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಜೀವನ್ ಭಟ್ಟರಾಯಿ ತನ್ನ ಐದು ಜನ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಕುಮಟಾ ಭಾಗಕ್ಕೆ ಬಂದಿದ್ದನು. ಕಳೆದ ಮೂರು ದಿನಗಳಿಂದ ಸ್ಥಳೀಯ ಖಾಸಗಿ ರೆಸಾರ್ಟ್ ಒಂದರಲ್ಲಿ ಈ ಯುವಕರ ತಂಡ ತಂಗಿತ್ತು. ಇಂದು ಕಡ್ಲೆ ಕಡಲ ತೀರಕ್ಕೆ ತೆರಳಿದ್ದ ಸ್ನೇಹಿತರು, ಸಮುದ್ರದ ಅಂಚಿನಲ್ಲಿ ರೀಲ್ಸ್ ಮಾಡಲು ನೀರಿಗಿಳಿದಿದ್ದಾರೆ. ರೀಲ್ಸ್ ಚಿತ್ರೀಕರಣ ಮುಗಿದ ಬಳಿಕ ಸ್ನೇಹಿತರೆಲ್ಲರೂ ದಂಡೆಯತ್ತ ಹಿಂತಿರುಗಿದ್ದಾರೆ.
ಆದರೆ, ಜೀವನ್ ಭಟ್ಟರಾಯಿ ಮಾತ್ರ ಸಮುದ್ರದ ನೀರಿನಲ್ಲಿ ಆಟವಾಡುತ್ತಾ ಅಲ್ಲೇ ಉಳಿದುಕೊಂಡಿದ್ದನು. ಆತ ಸ್ವಲ್ಪ ಸಮಯದ ನಂತರ ಹಿಂಬಾಲಿಸಿ ಬರಬಹುದು ಎಂದು ಭಾವಿಸಿದ ಸ್ನೇಹಿತರು ಮುಂದೆ ಸಾಗಿದ್ದಾರೆ. ಆದರೆ, ಅಷ್ಟರಲ್ಲೇ ಅನಿರೀಕ್ಷಿತವಾಗಿ ಅಪ್ಪಳಿಸಿದ ಸಮುದ್ರದ ಬೃಹತ್ ಅಲೆಯಲ್ಲಿ ಸಿಲುಕಿದ ಜೀವನ್ ಕಣ್ಣಿಮೆಚ್ಚಿಸುವಷ್ಟರಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ತೀವ್ರಗೊಂಡ ಶೋಧ ಕಾರ್ಯ, ಪ್ರಕರಣ ದಾಖಲು:
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಕರಾವಳಿ ಕಾವಲುಪಡೆಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಕರಾವಳಿ ಕಾವಲುಪಡೆ (Coastal Security Police) ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಸಮುದ್ರದಲ್ಲಿ ಯುವಕನ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಬಾಷಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.