


ಡೈಲಿವಾರ್ತೆ: 16/ಜೂ./2026


ಉಳ್ಳಾಲ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು

ಉಳ್ಳಾಲ, ಜೂನ್ 15: ಇಲ್ಲಿನ ಸೋಮೇಶ್ವರ ಬಸ್ಸು ತಂಗುದಾಣದ ಬಳಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ನಿವಾಸದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಭಾನುವಾರ ಸಂಜೆ ವರದಿಯಾಗಿದೆ.
ಸೋಮೇಶ್ವರ ನಿವಾಸಿ ಶಾಂತಿ ಎಂಬವರ ಪುತ್ರಿ, 16 ವರ್ಷದ ಸಮನ್ವಿ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಈಕೆ ಸೋಮೇಶ್ವರದ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಭಾನುವಾರ ಸಂಜೆ ಮನೆಯಲ್ಲಿ ತಾಯಿ ಮತ್ತು ಹಿರಿಯ ಸಹೋದರಿ ಇದ್ದ ಸಂದರ್ಭದಲ್ಲಿ ಸಮನ್ವಿ ಸ್ನಾನಕ್ಕೆಂದು ಕೋಣೆಗೆ ತೆರಳಿದ್ದಾಳೆ. ಆದರೆ, ಎಷ್ಟು ಸಮಯ ಕಳೆದರೂ ಆಕೆ ಹೊರಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಸಮನ್ವಿ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಯತ್ನಿಸಿದರೂ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಳು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಉಳ್ಳಾಲ ಠಾಣೆಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ: ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ (ಆತ್ಮಹತ್ಯೆ ಪತ್ರ) ಪತ್ತೆಯಾಗದ ಕಾರಣ, ಇಷ್ಟು ಸಣ್ಣ ವಯಸ್ಸಿನ ವಿದ್ಯಾರ್ಥಿನಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ನಿಖರವಾದ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಮೃತಳು ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾಳೆ.