


ಡೈಲಿವಾರ್ತೆ: 17/ಜೂ./2026


ಪಟ್ಟಾ ನಮೂದಿಗೆ ಹಣದ ಬೇಡಿಕೆ: ಲಂಚ ಪಡೆಯುತ್ತಿದ್ದಾಗ ತಾಯಿ-ಮಗ ಲೋಕಾಯುಕ್ತ ಬಲೆಗೆ

ಬಳ್ಳಾರಿ, ಜೂನ್ 17: ಇನಾಮ್ ಜಮೀನಿನ ದಾಖಲೆ ರದ್ದುಪಡಿಸಿ ಪಟ್ಟಾ ನಮೂದು ಮಾಡಿಕೊಡುವುದಕ್ಕಾಗಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಸಿರುಗುಪ್ಪ ತಾಲೂಕು ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿ (FDA) ಹಾಗೂ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಸಿರುಗುಪ್ಪ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಸುವರ್ಣ ಹಾಗೂ ಅವರ ಪುತ್ರ ದೀಪಕ್ ಎಂದು ಗುರುತಿಸಲಾಗಿದೆ.
ಬೈರಾಪುರ ಗ್ರಾಮದ ನಿವಾಸಿ ಗೋವಿಂದ ಎಂಬವರ ಹೆಸರಿನ ಸರ್ವೇ ನಂ.57/4/ಡಿ, 7 ಎಕರೆ 68 ಸೆಂಟ್ಸ್ ವಿಸ್ತೀರ್ಣದ ಜಮೀನಿನ ಪಹಣಿ ಕಲಂ-6ರಲ್ಲಿ ನಮೂದಾಗಿದ್ದ “ಇನಾಮ್” ದಾಖಲೆಯನ್ನು ರದ್ದುಪಡಿಸಿ “ಪಟ್ಟಾ” ಎಂದು ನಮೂದು ಮಾಡಿಕೊಡುವ ಕಾರ್ಯಕ್ಕಾಗಿ ಅವರು ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿದ್ದರು.
ಈ ವೇಳೆ ಕೆಲಸ ಮಾಡಿಕೊಡುವುದಕ್ಕಾಗಿ ಸುವರ್ಣ ಅವರು ₹1.10 ಲಕ್ಷ ಲಂಚದ ಹಣವನ್ನು ಬೇಡಿಕೆ ಇಟ್ಟಿದ್ದಾರೆ ಎಂದು ಗೋವಿಂದ ಆರೋಪಿಸಿದ್ದು, ಈ ಕುರಿತು ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರಿನ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪದ ಸತ್ಯಾಸತ್ಯತೆ ದೃಢಪಡಿಸಿಕೊಂಡು, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 7(ಎ) ಅಡಿಯಲ್ಲಿ 04/2026ನೇ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಸೂಕ್ತ ಬಲೆ ಬೀಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಲಂಚದ ಹಣ ಪಡೆಯುತ್ತಿದ್ದ ವೇಳೆ ಸುವರ್ಣ ಹಾಗೂ ಅವರ ಪುತ್ರ ದೀಪಕ್ ಅವರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಈ ಕಾರ್ಯಾಚರಣೆ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಮತ್ತೊಮ್ಮೆ ಕಠಿಣ ಸಂದೇಶ ರವಾನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.