


ಡೈಲಿವಾರ್ತೆ: 17/ಜೂ./2026


ವಾಕಿಂಗ್‌ಗೆ ತೆರಳಿದ್ದ ವೃದ್ಧೆಯ ಭೀಕರ ಹತ್ಯೆ: ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕೊಲೆ, ಚಿನ್ನಕ್ಕಾಗಿ ಕೃತ್ಯ ಶಂಕೆ

ತುಮಕೂರು, ಜೂನ್ 17: ತೋಟಕ್ಕೆ ವಾಕಿಂಗ್‌ಗೆಂದು ತೆರಳಿದ್ದ 74 ವರ್ಷದ ವೃದ್ಧೆಯೊಬ್ಬರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿಎನ್ ದುರ್ಗ ಹೋಬಳಿಯ ದಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.
ರತ್ನಮ್ಮ (74) ಕೊಲೆಯಾದ ವೃದ್ಧೆ. ಮಂಗಳವಾರ ಸಂಜೆ ಎಂದಿನಂತೆ ವಾಕಿಂಗ್‌ಗಾಗಿ ತೋಟದ ಕಡೆಗೆ ತೆರಳಿದ್ದ ರತ್ನಮ್ಮ ಅವರು ರಾತ್ರಿ ತಡವಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಸೊಸೆ ಭಾಗ್ಯಮ್ಮ ಹಾಗೂ ಗ್ರಾಮಸ್ಥರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಹುಡುಕಾಟದ ವೇಳೆ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ತೋಟದ ಮನೆಯ ಸಮೀಪ ರತ್ನಮ್ಮ ಅವರ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಅವರ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಭೀಕರವಾಗಿ ಹತ್ಯೆಗೈದಿರುವುದು ಕಂಡುಬಂದಿದೆ.
ಮೂರು ವರ್ಷಗಳ ಹಿಂದೆ ಪತಿ ಮುದ್ದಬಸಪ್ಪ ಅವರನ್ನು ಕಳೆದುಕೊಂಡಿದ್ದ ರತ್ನಮ್ಮ ಅವರು ಸೊಸೆ ಭಾಗ್ಯಮ್ಮ ಅವರೊಂದಿಗೆ ವಾಸವಾಗಿದ್ದರು. ಪ್ರತಿದಿನ ಸಂಜೆ ತೋಟದ ಕಡೆಗೆ ವಾಕಿಂಗ್‌ಗೆ ತೆರಳುವುದು ಅವರ ದಿನಚರಿಯಾಗಿತ್ತು. ಆದರೆ ಮಂಗಳವಾರದ ವಾಕಿಂಗ್ ಅವರ ಬದುಕಿನ ಕೊನೆಯ ಹೆಜ್ಜೆಯಾಯಿತು.
ಘಟನೆಯ ಹಿಂದೆ ಚಿನ್ನಾಭರಣ ದರೋಡೆ ಉದ್ದೇಶವಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಮೈಮೇಲಿದ್ದ ಚಿನ್ನಕ್ಕಾಗಿ ಹತ್ಯೆ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.