


ಡೈಲಿವಾರ್ತೆ: 18/ಜೂ./2026


ಭಟ್ಕಳದಲ್ಲಿ ಮತ್ತೆ ಕೋಮು ಸಂಘರ್ಷದ ಕಿಡಿ: ಪೊಲೀಸ್ ಠಾಣೆಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ, ತಡರಾತ್ರಿ ಭಾರಿ ಪ್ರತಿಭಟನೆ

ಭಟ್ಕಳ: ಇತ್ತೀಚಿನ ದಿನಗಳಲ್ಲಿ ಶಾಂತವಾಗಿದ್ದ ಕರಾವಳಿ ನಗರಿ ಭಟ್ಕಳದಲ್ಲಿ ಮತ್ತೆ ಕೋಮು ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. ಹಿಂದೂ ಯುವತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಮುಸ್ಲಿಂ ಯುವಕನನ್ನು ಪ್ರಶ್ನಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ನೂರಾರು ಹಿಂದೂ ಕಾರ್ಯಕರ್ತರು ತಡರಾತ್ರಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಭಾರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಇದರಿಂದಾಗಿ ನಗರದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ಹಿನ್ನೆಲೆ:
ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಅನುಮಾನಗೊಂಡ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿದ್ದಾರೆ. “ನೀವಿಬ್ಬರೂ ಎಲ್ಲಿಗೆ ಹೋಗುತ್ತಿದ್ದೀರಾ? ಭಟ್ಕಳದಿಂದ ಸಾಗರದ ಕಾಡಿನ ಕಡೆಗೆ ನಿಮಗೆ ಏನು ಕೆಲಸ?” ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರಿಂದ ಸೂಕ್ತ ಹಾಗೂ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ, ವಿಷಯ ಗಂಭೀರವೆಂದು ಪರಿಗಣಿಸಿದ ಮುಖಂಡರು ಇಬ್ಬರನ್ನೂ ಭಟ್ಕಳ ಶಹರ ಪೊಲೀಸ್ ಠಾಣೆಗೆ ಕರೆತಂದು, ಬುದ್ಧಿ ಹೇಳುವಂತೆ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಯುವಕ ಮತ್ತು ಯುವತಿಯನ್ನು ವಿಚಾರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದ ಹಿಂದೂ ಮುಖಂಡರಾದ ಶ್ರೀಕಾಂತ್ ನಾಯ್ಕ್ ಹಾಗೂ ಕುಮಾರ್ ನಾಯ್ಕ್ ಅವರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಹಿಂದೂ ಸಂಘಟನೆಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ತಡರಾತ್ರಿಯೇ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಕಾರಿನಲ್ಲಿದ್ದ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ಸರ್ಕಾರದ ಹಾಗೂ ಪೊಲೀಸರ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದರು. ಮುಖಂಡರ ಮೇಲಿನ ಕೇಸ್‌ನಿಂದಾಗಿ ಭಟ್ಕಳದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಠಾಣೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.