ಡೈಲಿವಾರ್ತೆ: 18/ಜೂ./2026

ಆಟವಾಡುತ್ತಿದ್ದ ಪುಟಾಣಿಗಳ ಮೇಲೆ ಕುಸಿದ ಕಾಂಪೌಂಡ್ ಗೋಡೆ-ಗೇಟ್; 5 ವರ್ಷದ ಬಾಲಕ ದುರ್ಮರಣ, ಮತ್ತೋರ್ವ ಬಾಲಕಿ ಗಂಭೀರ

ಬೆಂಗಳೂರು, ಜೂ.18: ಆಟವಾಡುತ್ತಿದ್ದ ಪುಟಾಣಿಗಳ ಮೇಲೆ ಮನೆಯ ಕಾಂಪೌಂಡ್ ಗೋಡೆ ಮತ್ತು ಕಬ್ಬಿಣದ ಗೇಟ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮೃತ ಬಾಲಕನನ್ನು ಯಾದಗಿರಿ ಮೂಲದ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿರುವ ದಾವಲ್ ಸಾಬ್ ಅವರು ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಲು ಯತ್ನಿಸುತ್ತಿದ್ದು, ಅವರ ಪತ್ನಿ ಹಾಗೂ ಪುತ್ರ ಅಫೀನ್ ಕೇವಲ ಐದು ದಿನಗಳ ಹಿಂದಷ್ಟೇ ಬಾಗಲೂರು ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ಅಫೀನ್ ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಕ್ಕಳು ಬಿ.ಸಿ. ನರಸಪ್ಪ ಎಂಬುವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಾ ಕಬ್ಬಿಣದ ಗೇಟ್ ಹಿಡಿದು ಜೀಕಾಡುತ್ತಿದ್ದಾಗ, ಗೇಟ್‌ನ ಭಾರವನ್ನು ತಡೆಯಲು ಸಾಧ್ಯವಾಗದೇ ಕಾಂಪೌಂಡ್ ಗೋಡೆ ಗೇಟ್ ಸಮೇತ ಏಕಾಏಕಿ ಮಕ್ಕಳ ಮೇಲೆ ಕುಸಿದು ಬಿದ್ದಿದೆ.
ಭಾರೀ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಧಾವಿಸಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದಿದ್ದಾರೆ. ಬಳಿಕ ಇಬ್ಬರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದ ಅಫೀನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಮನ್ವಿ ಎಂಬ ಬಾಲಕಿಗೆ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ಬಾಗಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕಾಂಪೌಂಡ್ ಗೋಡೆಯ ಅವೈಜ್ಞಾನಿಕ ನಿರ್ಮಾಣ ಹಾಗೂ ಸುರಕ್ಷತಾ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.