ಡೈಲಿವಾರ್ತೆ: 23/ಜೂ./2026

​ಪ್ರಿಯಕರನ ಜೊತೆ ಯುವತಿ ನಾಪತ್ತೆ: ತಂದೆಯ ನಿಂದನೆಗೆ ಮನನೊಂದು ಯುವಕ ಆತ್ಮಹತ್ಯೆ – ​ದಲಿತ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಯುವತಿಯೊಬ್ಬಳು ಮನೆ ಬಿಟ್ಟು ಓಡಿ ಹೋದ ಘಟನೆಗೆ ಸಂಬಂಧಿಸಿದಂತೆ, ಆಕೆಯ ತಂದೆಯ ನಿಂದನೆ ಹಾಗೂ ಸಾರ್ವಜನಿಕರ ಸಂಶಯದ ದೃಷ್ಟಿಗೆ ಮನನೊಂದು 20 ವರ್ಷದ ದಲಿತ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಅತ್ಯಂತ ಆಘಾತಕಾರಿ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ.

​ಮೃತನನ್ನು ಚಂದನ್ (20) ಎಂದು ಗುರುತಿಸಲಾಗಿದ್ದು, ಈ ಸಾವು ಇದೀಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ಘಟನೆಯ ಹಿನ್ನೆಲೆ:
​ಕುಡ್ಲೂರು ಗ್ರಾಮದ 18 ವರ್ಷದ ಯುವತಿಯೊಬ್ಬಳು ಜೂನ್ 14 ರಂದು ತನ್ನ ಪ್ರಿಯಕರನ ಜೊತೆ ತೆರಳುವ ಮುನ್ನ ಮನೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಆಕೆಯ ತಂದೆ, ಯುವತಿಯ ಸ್ನೇಹಿತನಾಗಿದ್ದ ಚಂದನ್‌ನನ್ನು ತರಾಟೆಗೆ ತಗೆದುಕೊಂಡಿದ್ದರು. ಮಗಳು ಓಡಿಹೋಗಲು ನೀನೇ ಕಾರಣ, ಅವಳು ಎಲ್ಲಿದ್ದಾಳೆ ಎಂದು ನಿನಗೆ ಗೊತ್ತು, ನಿಜ ಹೇಳು ಎಂದು ಚಂದನ್ ಜೊತೆ ತೀವ್ರ ಗಲಾಟೆ ಮಾಡಿದ್ದರು ಎನ್ನಲಾಗಿದೆ.
​ಇನ್ನೊಂದೆಡೆ, ಯುವತಿ ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಕಡೂರು ತಾಲೂಕಿನ ಬೀರೂರು ಪೊಲೀಸರು, ಯುವತಿಯ ಮೊಬೈಲ್ ಕಾಲ್ ಲಿಸ್ಟ್ (Call List) ಆಧಾರದ ಮೇಲೆ ಚಂದನ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು.

​ಅಂತಿಮ ಸಂದೇಶ ಕಳುಹಿಸಿ ಯುವಕ ಆತ್ಮಹತ್ಯೆ:
​ಜೂನ್ 21ರ ಸಂಜೆ ಪೊಲೀಸರ ವಿಚಾರಣೆ ಮುಗಿಸಿಕೊಂಡು ಮನೆಗೆ ಮರಳಿದ ಚಂದನ್ ತೀವ್ರ ಖಿನ್ನತೆಗೆ ಒಳಗಾಗಿದ್ದನು. ಸಾವಿಗೂ ಮುನ್ನ ತನ್ನ ತಾಯಿಗೆ ಮೊಬೈಲ್‌ನಲ್ಲಿ ಸಂದೇಶ (Message) ಕಳುಹಿಸಿದ್ದ ಯುವಕ, ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
​ಅಮ್ಮ, ಆ ಹುಡುಗಿ ಎಲ್ಲಿದ್ದಾಳೆ ಎಂದು ನನಗೆ ನಿಜವಾಗಿಯೂ ಗೊತ್ತಿಲ್ಲ. ಅವಳು ಮನೆ ಬಿಟ್ಟು ಹೋಗಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಊರಿನ ಜನ ನನ್ನನ್ನು ವಿಚಿತ್ರವಾಗಿ, ಅಪರಾಧಿಯಂತೆ ನೋಡುತ್ತಿದ್ದಾರೆ. ಆ ಹುಡುಗಿಯ ತಂದೆ ನನಗೆ ಎಲ್ಲರ ಮುಂದೆ ತೀವ್ರವಾಗಿ ಬೈದು ನಿಂದಿಸಿದ್ದಾರೆ. ಈ ಅಪಮಾನ ಭರಿಸಿ ನನಗೆ ಬದುಕಲು ಇಷ್ಟವಿಲ್ಲ, ನನ್ನನ್ನು ಕ್ಷಮಿಸಿಬಿಡು ಎಂದು ಸಂದೇಶದಲ್ಲಿ ಉಲ್ಲೇಖಿಸಿ ಚಂದನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

​ಅವನು ನನ್ನ ಅಣ್ಣನಿದ್ದಂತೆ ಎಂದಿದ್ದ ಯುವತಿ:
​ವಿಪರ್ಯಾಸವೆಂದರೆ, ಮನೆ ಬಿಟ್ಟು ಹೋಗಿದ್ದ ಯುವತಿ ತಂದೆಗೆ ಬರೆದಿಟ್ಟಿದ್ದ ಪತ್ರದಲ್ಲಿ, ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ. ಚಂದನ್ ನನಗೆ ಅಣ್ಣನಿದ್ದಂತೆ ಎಂದು ಸ್ಪಷ್ಟವಾಗಿ ಬರೆದಿದ್ದಳು. ಆದಾಗ್ಯೂ, ಯುವತಿಯ ತಂದೆಯ ಕಿರುಕುಳ, ಪೊಲೀಸರ ವಿಚಾರಣೆಯ ಒತ್ತಡ ಹಾಗೂ ಸಮಾಜದ ನಿಂದನೆಯೇ ಚಂದನ್ ಸಾವಿಗೆ ನೇರ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ದಲಿತ ಸಂಘಟನೆಗಳ ಪ್ರತಿಭಟನೆ – ನ್ಯಾಯಕ್ಕೆ ಆಗ್ರಹ:
​ಯುವಕನ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬೀರೂರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯುವತಿಯ ತಂದೆಯ ನಿರಂತರ ಕಿರುಕುಳ ಮತ್ತು ಸುಳ್ಳು ಆರೋಪದಿಂದಲೇ ಚಂದನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಯುವತಿಯ ತಂದೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
​ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರಪರಾಧಿ ಯುವಕನ ಸಾವಿಗೆ ನಿಖರ ಕಾರಣವೇನು ಹಾಗೂ ನಾಪತ್ತೆಯಾಗಿರುವ ಯುವತಿ ಎಲ್ಲಿದ್ದಾಳೆ ಎಂಬ ಸತ್ಯಾಂಶ ಪೊಲೀಸರ ಮುಂದಿನ ತನಿಖೆಯಿಂದ ಹೊರಬರಬೇಕಿದೆ.