ಡೈಲಿವಾರ್ತೆ: 23/ಜೂ./2026

ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಿಧಿವಶ

ಮಂಗಳೂರು, ಜೂ.23: ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಖ್ಯಾತ ಇಸ್ಲಾಮಿಕ್ ವಿದ್ವಾಂಸ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ (78) ಅವರು ಇಂದು (ಜೂನ್ 23) ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


​ಕೆಲವು ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಪ್ರಕಟಿಸಿವೆ. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಬಂಧು-ಬಳಗ ಮತ್ತು ಶಿಷ್ಯಂದಿರನ್ನು ಅಗಲಿದ್ದಾರೆ.


​ಧಾರ್ಮಿಕ ರಂಗದ ಧ್ರುವತಾರೆ:


​2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಖಾ ಉಸ್ತಾದ್ ಅವರು, ಕರಾವಳಿ ಮತ್ತು ಕೇರಳ ಭಾಗದ ಮುಸ್ಲಿಂ ಸಮುದಾಯದ ಅತ್ಯಂತ ಪ್ರಭಾವಿ ಹಾಗೂ ಗೌರವಾನ್ವಿತ ಧಾರ್ಮಿಕ ಮುಖಂಡರಾಗಿದ್ದರು. ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಸುಮಾರು 200ಕ್ಕೂ ಅಧಿಕ ಜಮಾಅತ್‌ಗಳ ಖಾಝಿಯಾಗಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಸಮಸ್ತ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿ, ಸಮಾಜದಲ್ಲಿ ಸೌಹಾರ್ದತೆ ಮತ್ತು ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


​ಅಂತಿಮ ದರ್ಶನ ಹಾಗೂ ದಫನ ಕಾರ್ಯ:
​ಖಾಝಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಂಗಳೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ಇರಿಸಲಾಗಿದ್ದು, ನೂರಾರು ಗಣ್ಯರು ಹಾಗೂ ಸಾರ್ವಜನಿಕರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
​ಮೃತರ ಅಂತಿಮ ಸಂಸ್ಕಾರದ (ದಫನ ಕಾರ್ಯ) ಕುರಿತು ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಖಾಝಿಯವರ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದ ಬಳಿಕ ದಫನ ಕಾರ್ಯದ ಸಮಯ ಮತ್ತು ಸ್ಥಳವನ್ನು ಅಧಿಕೃತವಾಗಿ ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
​ತ್ವಾಖಾ ಉಸ್ತಾದ್ ಅವರ ನಿಧನಕ್ಕೆ ಕರಾವಳಿಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ರಂಗದ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.