


ಡೈಲಿವಾರ್ತೆ: 23/ಜೂ./2026


ರಾಜಕೀಯ ಹತಾಶೆಯಿಂದ ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಶಿವರಾಮ್ ಹೆಬ್ಬಾರ್ ಆಕ್ರೋಶ

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ. ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಅವರು ತಮ್ಮ ಮಾನಸಿಕ ಸ್ಥಿಮಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದ್ದು, ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಕಾಂಗ್ರೆಸ್ ಶಾಸಕರನ್ನು ಹಣ ನೀಡಿ ಖರೀದಿಸಲಾಗಿತ್ತು ಎಂಬ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಸಂಪೂರ್ಣ ಆಧಾರರಹಿತ ಮತ್ತು ಬಾಲಿಶವಾದುದಾಗಿದೆ. ಅವರ ತಲೆ ಸರಿಯಾಗಿದೆಯೇ? ಎಂದು ಪ್ರಶ್ನಿಸಿರುವ ಹೆಬ್ಬಾರ್, ಒಂದು ವೇಳೆ ಈ ಹೇಳಿಕೆಯಲ್ಲಿ ಸತ್ಯಾಂಶವಿದ್ದರೆ, ಯಾರು ಹಣ ನೀಡಿದರು, ಯಾರು ಹಣ ಪಡೆದರು, ಎಷ್ಟು ಹಣ ನೀಡಲಾಯಿತು ಮತ್ತು ಎಲ್ಲಿ ವ್ಯವಹಾರ ನಡೆಯಿತು ಎಂಬುದನ್ನು ದಾಖಲೆ ಸಮೇತ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ನೇರ ಸವಾಲು ಹಾಕಿದ್ದಾರೆ.
ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಈಶ್ವರಪ್ಪ ಅವರು ತಮ್ಮ ರಾಜಕೀಯ ಹತಾಶೆ ಹಾಗೂ ಮಾನಸಿಕ ಅಸ್ಥಿರತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಂದು 17 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ರಾಜಕೀಯ ತ್ಯಾಗ ಮಾಡಿದ ಪರಿಣಾಮವಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅದರ ಫಲಾನುಭವಿಯಾಗಿ ಸಚಿವ ಸ್ಥಾನವನ್ನು ಅನುಭವಿಸಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು ಎಂಬುದನ್ನು ಅವರು ಮರೆತಂತಿದೆ. ಇಂದು ಅದೇ ಶಾಸಕರ ಬಗ್ಗೆ ಅವಹೇಳನಕಾರಿ ಹಾಗೂ ಅವಮಾನಕಾರಿ ಭಾಷೆಯಲ್ಲಿ ಮಾತನಾಡುತ್ತಿರುವುದು ಅವರ ಕೃತಘ್ನತೆಯ ಪರಮಾವಧಿಯಾಗಿದೆ ಎಂದು ಹೆಬ್ಬಾರ್ ಟೀಕಿಸಿದರು.
ಈಶ್ವರಪ್ಪ ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸಲು ವಿಫಲರಾದರೆ ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಅವರಿಗೆ ಉಳಿಯುವುದಿಲ್ಲ. ಅವರು ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಶಾಸಕ ಶಿವರಾಮ್ ಹೆಬ್ಬಾರ್ ಅಗ್ರಹಿಸಿದ್ದಾರೆ.
ತಮ್ಮ ಸಚಿವ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪಗಳು, ವಿಶೇಷವಾಗಿ ಬೆಳಗಾವಿಯ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದ ಸಂದರ್ಭದಲ್ಲಿ ಅವರ ವಿರುದ್ಧ ವ್ಯಕ್ತವಾಗಿದ್ದ ಜನಾಕ್ರೋಶವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ತಮ್ಮ ವೈಫಲ್ಯಗಳು ಹಾಗೂ ಭ್ರಷ್ಟಾಚಾರದ ಕಪ್ಪು ಚರಿತ್ರೆಯನ್ನು ಮರೆಮಾಚಲು ಈಶ್ವರಪ್ಪ ಅವರು ಈಗ ಅಸಂಬದ್ಧ ಹಾಗೂ ಆಧಾರರಹಿತ ಹೇಳಿಕೆಗಳ ಮೊರೆ ಹೋಗಿದ್ದಾರೆ ಎಂದು ಹೆಬ್ಬಾರ್ ಆರೋಪಿಸಿದರು.
ರಾಜಕೀಯದಲ್ಲಿ ಕನಿಷ್ಠ ಜವಾಬ್ದಾರಿ, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ನೈತಿಕತೆ ಇರಬೇಕಾಗುತ್ತದೆ. ಆದರೆ ಕೆ.ಎಸ್. ಈಶ್ವರಪ್ಪ ಅವರು ಈ ಮೂರೂ ಮೌಲ್ಯಗಳಿಂದ ಸಂಪೂರ್ಣವಾಗಿ ದೂರವಾಗಿರುವುದು ಸ್ಪಷ್ಟವಾಗಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಅವರು ಮೊದಲು ತಮ್ಮ ರಾಜಕೀಯ ಆತ್ಮಾವಲೋಕನ ಮಾಡಿಕೊಳ್ಳಲಿ, ನಂತರ ಇತರರ ಬಗ್ಗೆ ಮಾತನಾಡಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ತಿರುಗೇಟು ನೀಡಿದ್ದಾರೆ.