


ಡೈಲಿವಾರ್ತೆ: 23/ಜೂ./2026


ಪಡುಕೋಣೆ ಸಹಕಾರಿ ಸಂಘದಲ್ಲಿ ಮಹಾ ಹಗರಣದ ಆತಂಕ: ಬರೋಬ್ಬರಿ ₹35 ಕೋಟಿಗೂ ಹೆಚ್ಚು ಮೊತ್ತದ ಆಸ್ತಿ ಅಪಾಯದಲ್ಲಿ, ₹4 ಕೋಟಿ ಅನುತ್ಪಾದಕ ಸಾಲ! ತನಿಖೆಗೆ ಆದೇಶ

ಬೈಂದೂರು: ತಾಲೂಕಿನ ನಾಡ ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿಗಳ ಬೃಹತ್ ಅವ್ಯವಹಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಠೇವಣಿದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಧ್ವನಿ ಎತ್ತಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಅವರು ಸಂಘದ ಆಸ್ತಿ ಮತ್ತು ಸಾಲದ ಮರುಪಾವತಿಯಲ್ಲಿ ನಡೆದಿರುವ ಸಾಲು ಸಾಲು ಕಾನೂನು ಬಾಹಿರ ಚಟುವಟಿಕೆಗಳನ್ನು ಲೆಕ್ಕ ಪರಿಶೋಧನಾ ವರದಿಯ ಸಮೇತ ಬಹಿರಂಗಪಡಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣ ಪ್ರಪಾತಕ್ಕೆ?

ಸಂಘದ ಆಡಿಟ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ದಿನೇಶ್ ಗಾಣಿಗ, ಪ್ರಮುಖವಾಗಿ ಎರಡು ಅಂಶಗಳು ಇಡೀ ಸಹಕಾರಿ ಸಂಘದ ದಿವಾಳಿತನವನ್ನು ಎತ್ತಿ ತೋರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು:
₹35 ಕೋಟಿಗೂ ಹೆಚ್ಚು ಮೊತ್ತ ಅಪಾಯದಲ್ಲಿ: ಸಂಘದಲ್ಲಿ ಅಪಾಯ ಸಾಧ್ಯತೆ ತುಲನೆ ಮಾಡಿದ ಆಸ್ತಿಗಳಿಗೆ ಬಂಡವಾಳ ಅನುಪಾತದ ಲೆಕ್ಕಾಚಾರವನ್ನು ನೋಡಿದಾಗ, ಬರೋಬ್ಬರಿ 35.00 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವು ಅತ್ಯಂತ ಅಪಾಯದ ಸುಳಿಗೆ ಸಿಲುಕಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
₹4 ಕೋಟಿಗೂ ಮಿಕ್ಕಿದ ಅನುತ್ಪಾದಕ ಸಾಲ (NPA): ಬ್ಯಾಂಕಿನಲ್ಲಿ ವಸೂಲಿಯಾಗದ ಮತ್ತು ಎಂದಿಗೂ ಮರಳಿ ಬಾರದ ಸ್ಥಿತಿಯಲ್ಲಿರುವ ಅನುತ್ಪಾದಕ ಸಾಲಗಳ (NPA) ಮೊತ್ತ 4.00 ಕೋಟಿ ರೂಪಾಯಿಗಳನ್ನು ದಾಟಿದೆ. ಅಂದರೆ ಒಟ್ಟು ಸಾಲದ ಪ್ರಮಾಣಕ್ಕೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಬರೋಬ್ಬರಿ 13.73% ರಷ್ಟಾಗಿದೆ!
ಅಧ್ಯಕ್ಷರ ಕುಟುಂಬಕ್ಕೇ ನಿಯಮ ಬಾಹಿರ ಸಾಲದ ಭಾಗ್ಯ!
ಸಂಘದ ಅಧ್ಯಕ್ಷರಾದ ರಾಜೀವ ಮೊಗವೀರ ಹಾಗೂ ಅವರ ಸಂಬಂಧಿಕರು ಯಾವುದೇ ಕಾನೂನು ತಜ್ಞರ ಸಲಹೆ ಪಡೆಯದೇ, ಸೂಕ್ತ ಅಡಮಾನ ಭದ್ರತೆಗಳಿಲ್ಲದೇ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ. ಖಾಲಿ ಜಾಗಗಳಿದ್ದರೂ ತೆಂಗು, ಬಾಳೆ, ಕಾಳುಮೆಣಸು ಬೆಳೆ ಇದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರದ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಅಲ್ಲದೆ, ಇತರೆ ಮುಚ್ಚುವ ಹಂತದಲ್ಲಿರುವ ಪತ್ತಿನ ಸಹಕಾರಿ ಸಂಘಗಳಲ್ಲಿ ನಿಯಮ ಬಾಹಿರವಾಗಿ ₹1.70 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಇಟ್ಟು ಸಂಘದ ಆರ್ಥಿಕತೆಗೆ ಕೊಡಲಿಪೆಟ್ಟು ನೀಡಲಾಗಿದೆ.
ಬಡ ರೈತರ ಠೇವಣಿಗೆ ಯಾರು ಗ್ಯಾರಂಟಿ?
ಇದು ರೈತ ಕುಟುಂಬಗಳು, ಬಡವರು ಮತ್ತು ಮಧ್ಯಮ ವರ್ಗದವರು ಕಷ್ಟಪಟ್ಟು ದುಡಿದು ಇಟ್ಟಿರುವ ಹಣ. ಭದ್ರತೆಯೇ ಇಲ್ಲದೆ ಸಾಲ ಹಂಚಿ, ಈಗ ಕೋಟ್ಯಾಂತರ ರೂಪಾಯಿ ಹಳ್ಳ ಹಿಡಿಯುವಂತಾಗಿದ್ದರೆ ಇನ್ನು ಠೇವಣಿದಾರರ ಗತಿಯೇನು?” ಎಂದು ದಿನೇಶ್ ಗಾಣಿಗ ಆಕ್ರೋಶ ವ್ಯಕ್ತಪಡಿಸಿದರು. ವಾಹನ ಹಾಗೂ ಭೂ ಆಧಾರಿತ ಸಾಲಗಳಲ್ಲಿ ಮೌಲ್ಯಕ್ಕಿಂತ ಅಧಿಕ ಸಾಲ ನೀಡಿರುವುದು, ಒಂದೇ RTC ಗೆ ಎರಡು ಸಾಲ ನೀಡಿರುವುದು ಸಂಘದ ಅಧೋಗತಿಯನ್ನು ಸಾರುತ್ತಿದೆ.
ಉನ್ನತ ಮಟ್ಟದ ತನಿಖೆಗೆ ಆದೇಶ: ಈ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದ ಕಲಂ 64, 65, ಹಾಗೂ 68ರ ಅಡಿಯಲ್ಲಿ ತಕ್ಷಣವೇ ನ್ಯಾಯಸಮ್ಮತ ತನಿಖೆ ನಡೆಸುವಂತೆ ಬೆಂಗಳೂರಿನ ಸಹಕಾರಿ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಲಾಗಿದ್ದು, ಇಲಾಖೆಯು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಆದೇಶ ಹೊರಡಿಸಿದೆ. ಒಂದು ವೇಳೆ ಸೂಕ್ತ ಕ್ರಮ ಜರುಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗಾಣಿಗ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.