ಡೈಲಿವಾರ್ತೆ: 25/ಜೂ./2026

ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ನಿವಾಸದ ಮೇಲೆ ಇ.ಡಿ ದಾಳಿ: 24 ಗಂಟೆಗಳಿಂದ ಮುಂದುವರಿದ ತಲಾಷ್, ಅಧಿಕಾರಿ ವಶಕ್ಕೆ?

ಬೆಳಗಾವಿ: ರಾಜ್ಯ ರಾಜಕಾರಣದ ಪ್ರಭಾವಿ ನಾಯಕರ ನಿಕಟ ಸಂಬಂಧಿಯೂ ಆಗಿರುವ ಬೆಳಗಾವಿ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನಡೆಸುತ್ತಿರುವ ಸರಣಿ ದಾಳಿ ಸತತ 24 ಗಂಟೆಗಳನ್ನು ಪೂರೈಸಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿಯ ಪತಿ (ಬಾಮೈದ) ಹಾಗೂ ಬಳ್ಳಾರಿಯ ಬಿಜೆಪಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರ ವಿರುದ್ಧ ಕೇಳಿಬಂದಿರುವ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ಗಳಿಕೆ ಹಾಗೂ ಹವಾಲಾ ದಂಧೆಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.


​ಅಹೋರಾತ್ರಿ ನಡೆದ ಶೋಧ ಕಾರ್ಯ:
​ಬುಧವಾರ ಮುಂಜಾನೆ 5:30ರ ಸುಮಾರಿಗೆ ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಅವರ ನಿವಾಸಕ್ಕೆ ಬೆಂಗಳೂರು ಮತ್ತು ಗೋವಾ ಇ.ಡಿ ಅಧಿಕಾರಿಗಳ ಜಂಟಿ ತಂಡ ಏಕಕಾಲಕ್ಕೆ ಲಗ್ಗೆ ಇಟ್ಟಿದೆ. ಅರೆಸೇನಾ ಪಡೆಗಳ ಬಿಗಿ ಭದ್ರತೆಯೊಂದಿಗೆ ಆರಂಭವಾದ ಈ ಶೋಧ ಕಾರ್ಯ ಇಡೀ ರಾತ್ರಿ ಮುಂದುವರಿದಿದ್ದು, ಅಧಿಕಾರಿಗಳು ನಿನ್ನೆಯಿಂದ ಮನೆ ಬಿಟ್ಟು ಹೊರಬಂದಿಲ್ಲ. ತಮಗೆ ಬೇಕಾದ ಉಪಹಾರ ಹಾಗೂ ಊಟವನ್ನು ಮನೆಗೇ ತರಿಸಿಕೊಂಡು ಸತತವಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದಾಳಿಯ ವೇಳೆ ಮಂಜುನಾಥ್ ಅವರ ಪತ್ನಿ ಹಾಗೂ ಕುಟುಂಬಸ್ಥರು ಮನೆಯಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ.


​ರಾಜ್ಯದ 10 ಕಡೆ ಇ.ಡಿ ದಾಳಿ: ಅಧಿಕಾರಿ ವಶಕ್ಕೆ:
​ಬೆಳಗಾವಿಯ 6 ಪ್ರಮುಖ ಸ್ಥಳಗಳು ಸೇರಿದಂತೆ ರಾಜ್ಯದ ಒಟ್ಟು 10 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಮಧ್ಯೆ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್‌ನಲ್ಲಿದ್ದ ವೈ. ಮಂಜುನಾಥ್ ಅವರನ್ನು ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ನಂಬಲರ್ಹ ಮೂಲಗಳು ತಿಳಿಸಿವೆ.


​ಮಂಜುನಾಥ್ ಮೇಲಿರುವ ಗಂಭೀರ ಆರೋಪಗಳು:
​ಸರ್ಕಾರಿ ಅಧಿಕಾರಿಯಾಗಿದ್ದುಕೊಂಡೇ ಹುದ್ದೆಯ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪಗಳು ಮಂಜುನಾಥ್ ಮೇಲಿವೆ. ಇ.ಡಿ ತನಿಖೆಗೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ
​ಅಕ್ರಮ ಆಸ್ತಿ ಗಳಿಕೆ: ಆದಾಯಕ್ಕಿಂತ ಅಧಿಕವಾಗಿ ಕೋಟ್ಯಂತರ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಸಂಪಾದನೆ ಮಾಡಿರುವ ಶಂಕೆ.
​ಬೇನಾಮಿ ಬಾರ್ ಲೈಸೆನ್ಸ್: ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡೇ, ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್ ಲೈಸೆನ್ಸ್‌ಗಳನ್ನು ಹೊಂದಿರುವ ಆರೋಪ.
​ಹವಾಲಾ ಮತ್ತು ಅಂತಾರಾಷ್ಟ್ರೀಯ ವಹಿವಾಟು: ದೇಶದ ಗಡಿ ದಾಟಿ ನಡೆದಿರುವ ಆರ್ಥಿಕ ವಹಿವಾಟುಗಳು ಹಾಗೂ ಹವಾಲಾ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಶಂಕೆ.
​ವಿವಾದಗಳ ಇತಿಹಾಸ: ಹಿಂದೆ ಜೈಲು ಸೇರಿದ್ದ ಅಧಿಕಾರಿ
​ವೈ. ಮಂಜುನಾಥ್ ವಿವಾದಗಳಿಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. 2009ರಿಂದ 2013ರವರೆಗೆ ಮೈಸೂರಿನಲ್ಲಿ ಅಬಕಾರಿ ಡಿಸಿ (DC) ಆಗಿದ್ದ ಅವಧಿಯಲ್ಲಿ ಲಂಚದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ಇವರನ್ನು ಬಂಧಿಸಿದ್ದರು. ಆ ವೇಳೆ 15 ದಿನಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಇವರು ಬಿಡುಗಡೆಯಾಗಿ ಬಂದಾಗ, ಇವರ ಬೆಂಬಲಿಗರು ಜೈಲಿನಿಂದ ಬರೋಬ್ಬರಿ 2 ಕಿಲೋಮೀಟರ್ ದೂರ ಇವರನ್ನು ಹೆಗಲ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡಿದ್ದರು. ಈ ಘಟನೆ ಆಗ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
​ಪ್ರಸ್ತುತ ಇ.ಡಿ ಅಧಿಕಾರಿಗಳ ಕೈಗೆ ಸಿಲುಕಿರುವ ಮಂಜುನಾಥ್ ಅವರ ಅಕ್ರಮ ಸಾಮ್ರಾಜ್ಯದ ಮತ್ತಷ್ಟು ಸ್ಫೋಟಕ ಮಾಹಿತಿ ತನಿಖೆಯ ಬಳಿಕ ಹೊರಬರಬೇಕಿದೆ.