


ಡೈಲಿವಾರ್ತೆ: 25/ಜೂ./2026


ತಡರಾತ್ರಿ ಮನೆಯೊಳಗೆ ನುಗ್ಗಿ ಕಚ್ಚಿದ ವಿಷಪೂರಿತ ಹಾವು – 12 ವರ್ಷದ ಬಾಲಕ ಬಲಿ, ಸಹೋದರಿ ಆಸ್ಪತ್ರೆಗೆ ದಾಖಲು

ಶಿರಸಿ: ಮನೆಯಲ್ಲಿ ತಂದೆಯೊಂದಿಗೆ ನೆಮ್ಮದಿಯಾಗಿ ಮಲಗಿದ್ದ ಇಬ್ಬರು ಮುಗ್ಧ ಮಕ್ಕಳ ಮೇಲೆ ವಿಷಪೂರಿತ ಹಾವೊಂದು ದಾಳಿ ನಡೆಸಿದ ಪರಿಣಾಮ, 12 ವರ್ಷದ ಬಾಲಕನೊಬ್ಬ ದುರಂತ ಅಂತ್ಯ ಕಂಡಿದ್ದು, ಆತನ ಸಹೋದರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
6ನೇ ತರಗತಿ ವಿದ್ಯಾರ್ಥಿ ಮಿಥನ್ ಪುಟ್ಟಪ್ಪ ನಾಯಕ್ (12) ಮೃತಪಟ್ಟ ದುರ್ದೈವಿ ಬಾಲಕ. ಈತನ ಸಹೋದರಿ ದೀಕ್ಷಾ ಪುಟ್ಟಪ್ಪ ನಾಯಕ್ ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯರಾತ್ರಿ ಎದುರಾದ ಯಮಸ್ವರೂಪಿ ಹಾವು:
ಸ್ಥಳೀಯ ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಎಂದಿನಂತೆ ಮಿಥನ್ ಮತ್ತು ದೀಕ್ಷಾ ರಾತ್ರಿ ಊಟ ಮುಗಿಸಿ ತಮ್ಮ ತಂದೆಯೊಂದಿಗೆ ಮನೆಯಲ್ಲಿ ಮಲಗಿದ್ದರು. ಆದರೆ, ತಡರಾತ್ರಿ ಇದ್ದಕ್ಕಿದ್ದಂತೆ ಇಬ್ಬರೂ ಮಕ್ಕಳು ಕಣ್ಣು ತೆರೆದು ತೀವ್ರ ಅಸ್ವಸ್ಥಗೊಂಡು ಪದೇ ಪದೇ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ಮಕ್ಕಳ ಆಕ್ರಂದನ ಹಾಗೂ ಸ್ಥಿತಿಯನ್ನು ಕಂಡು ಆತಂಕಗೊಂಡ ಪೋಷಕರು ತಕ್ಷಣವೇ ದೀಪಗಳನ್ನು ಆನ್ ಮಾಡಿ, ನೆರೆಹೊರೆಯವರನ್ನು ಸಹಾಯಕ್ಕೆ ಕರೆದಿದ್ದಾರೆ.
ಕತ್ತಲಲ್ಲಿ ಬೆಳಕಿಗೆ ಬಂದ ಸತ್ಯ:
ಸ್ಥಳೀಯರು ಮತ್ತು ಕುಟುಂಬಸ್ಥರು ಮನೆಯನ್ನು ಪರಿಶೀಲಿಸಿದಾಗ, ಕತ್ತಲೆಯಲ್ಲಿ ಹಾವೊಂದು ಮನೆಯೊಳಗೆ ಹರಿದಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಮಕ್ಕಳಿಬ್ಬರಿಗೂ ಹಾವು ಕಚ್ಚಿರುವುದನ್ನು ಪೋಷಕರು ಖಚಿತಪಡಿಸಿಕೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರೂ ಮಕ್ಕಳನ್ನು ತಡಮಾಡದೇ ಶಿರಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಮಿಥನ್ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಆತ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಹಾವು ಕಚ್ಚಿದ ಮತ್ತೊಂದು ಮಗು ದೀಕ್ಷಾ ಅವರ ಸ್ಥಿತಿಯೂ ಗಂಭೀರವಾಗಿದ್ದು, ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರ ಕಠಿಣ ಮೇಲ್ವಿಚಾರಣೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ.