ಡೈಲಿವಾರ್ತೆ: 25/ಜೂ./2026

​ಮಣಿಪಾಲದಲ್ಲಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದ ಖಾಸಗಿ ಶಾಲಾ ಬಸ್, ವಿದ್ಯಾರ್ಥಿಗಳು ಪಾರು!

​ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಜೂ. 25 ರಂದು ಗುರುವಾರ ಬೆಳಿಗ್ಗೆ ಶಾಲಾ ಮಕ್ಕಳಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಅತ್ಯಂತ ಭೀಕರವಾಗಿ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಕೆ.ಎಫ್.ಸಿ (KFC) ಬಳಿ ಸಂಭವಿಸಿದೆ. ಅದೃಷ್ಟವಶಾತ್ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪೋಷಕರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

​ಅಲ್-ಇಬಾದಾದ್ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ ಇದಾಗಿದ್ದು, ನಿತ್ಯದಂತೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಬಸ್ಸಿನ ಮುಂಭಾಗ ಹಾಗೂ ರಸ್ತೆ ವಿಭಾಜಕಕ್ಕೆ ತೀವ್ರ ಹಾನಿಯಾಗಿದೆ.
​​ಬಸ್ಸು ರಸ್ತೆ ವಿಭಾಜಕಕ್ಕೆ ಅಪ್ಪಳಿಸುತ್ತಿದ್ದಂತೆ ಒಳಗಿದ್ದ ಶಾಲಾ ಮಕ್ಕಳು ತೀವ್ರ ಭಯಭೀತರಾಗಿದ್ದು, ಜೋರಾಗಿ ಕಿರುಚಾಡಿದ್ದಾರೆ. ಘಟನೆಯ ಪರಿಣಾಮವಾಗಿ ಬಸ್ಸಿನಲ್ಲಿದ್ದ ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಗಿದೆ.

​ಘಟನೆ ನಡೆದ ತಕ್ಷಣವೇ ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.